ಬೈಪಾಸ್ ರಸ್ತೆ ಕಾಮಗಾರಿ ಶಾಸಕ ಸಿಮೆಂಟ್ ಮಂಜುರವರಿಂದ ವೀಕ್ಷಣೆ:
ಭಾನುವಾರದಿಂದ ಲಘು ವಾಹನಗಳ ಸಂಚಾರಕ್ಕೆ ಬೈಪಾಸ್ ರಸ್ತೆ ಮುಕ್ತ
ಸಕಲೇಶಪುರ: ಭಾನುವಾರ ಪಟ್ಟಣದಲ್ಲಿ ಸಕಲೇಶ್ವರಸ್ವಾಮಿರವರ ದಿವ್ಯ ರಥೋತ್ಸವ ನಡೆಯಲಿದ್ದು ಇದರಿಂದ ಟ್ರಾಫಿಕ್ ಕಿರಿ ಕಿರಿ ಹೆಚ್ಚಾಗುವುದರಿಂದ ಇದೀಗ ಶೇ.90ರಷ್ಟು ಮುಗಿದಿರುವ ಬೈಪಾಸ್ ರಸ್ತೆ ಕಾಮಗಾರಿಯನ್ನು ಶಾಸಕ ಸಿಮೆಂಟ್ ಮಂಜು ವೀಕ್ಷಿಸಿ ಭಾನುವಾರದಿಂದ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಈ ಸಂ‘ರ್‘ದಲ್ಲಿ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ ಪಟ್ಟಣದಲ್ಲಿ ಟ್ರಾಫಿಕ್ ಕಿರಿಕಿರಿ ಜಾಸ್ತಿಯಾಗಿರುವುದರಿಂದ ಬೈಪಾಸ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ಮುನ್ನವೇ 6 ಚಕ್ರದ ಒಳಗಿನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಟ್ರಾನ್‌ಸ್ಮಿಷನ್ ಟವರ್ ಸ್ಥಳಾಂತರವಾದ ನಂತರ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಕೊಲ್ಲಹಳ್ಳಿ ಸಮೀಪದ ಹಾಗೂ ಆನೆಮಹಲ್ ಸಮೀಪದ ಬೈಪಾಸ್ ರಸ್ತೆ ಪ್ರವೇಶ ದ್ವಾರದಲ್ಲಿ ಪೋಲಿಸ್ ಸೆಕ್ಯುರಿಟಿ ಹಾಕಿ ಲಘು ವಾಹನಗಳಿಗೆ ಮಾತ್ರ ಬೈಪಾಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು ಹಾಗೂ ಭಾರಿ ವಾಹನಗಳನ್ನು ನಾಳೆ ರಥೋತ್ಸವದ ಹಿನ್ನೆಲೆಯಲ್ಲಿ ಬಾಳ್ಳುಪೇಟೆ ಹಾಗೂ ಮಾರನಹಳ್ಳಿ ಸಮೀಪ ತಡೆಹಿಡಿಯಲಾಗುತ್ತದೆ. ನಂತರದ ದಿನಗಳಲ್ಲಿ ಬೈಪಾಸ್ ಹಾಗೂ ಪಟ್ಟಣದ ಒಳಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಅಂದರೆ ಕೊಲ್ಲಹಳ್ಳಿ ಕಡೆಯಿಂದ ಬೈಪಾಸ್‌ನಲ್ಲಿ ವಾಹನಗಳ ಪ್ರವೇಶಕ್ಕೆ ಆನೆಮಹಲ್‌ನಿಂದ ಬೈಪಾಸ್‌ಗೆ ವಾಹನಗಳು ಪ್ರವೇಶ ಮಾಡದೆ ಪಟ್ಟಣದ ಮುಖಾಂತರ ಹೊರ ಹೋಗುವಂತೆ ಮಾಡಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್, ಗುತ್ತಿಗೆದಾರ ಕಂಪನಿಯ ಇಂಜಿನಿಯರ್ ಶೇಖರ್, ಕೆಪಿಟಿಸಿಎಲ್ ಅಧಿಕಾರಿಗಳು ಹಾಜರಿದ್ದರು.