ಸಕಲೇಶಪುರ : ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನ ಮೇಲೆ ಹರಿದ ಕಾರು.
ಸಕಲೇಶಪುರ ಪುರಸಭಾ ಮಾಜಿ ಅಧ್ಯಕ್ಷ ಸಂತೋಷ್ ಜೈನ್ ಪುತ್ರನಿಂದ ಕೃತ್ಯ : ಆಸ್ಪತ್ರೆಯಲ್ಲಿ ಯುವಕ ಸಾವು.
ಸಕಲೇಶಪುರ : ಹೊಸ ಬಸ್ ನಿಲ್ದಾಣದ ಮುಂಭಾಗ ಕಳೆದ ರಾತ್ರಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನ ಮೇಲೆ ಕಾರು ಹರಿದ ಹಿನ್ನೆಲೆ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜರುಗಿದೆ.
ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನ ಮೇಲೆ ಕಾರು ಏಕಾಏಕಿ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೆಸಗನಹಳ್ಳಿ ಲೋಕೇಶ್ (22) ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಸಕಲೇಶಪುರ ಪುರಸಭೆಯ ಮಾಜಿ ಅಧ್ಯಕ್ಷ ಸಂತೋಷ್ ಜೈನ್ ಪುತ್ರ ಕಾರು ಚಲಾಯಿಸಿದ್ದ ಎಂದು ತಿಳಿದುಬಂದಿದ್ದು. ಯುವಕನಿಗೆ ಡಿಕ್ಕಿ ಮಾಡುವ ಮೊದಲೇ ಕ್ಯಾಂಟರ್ ಗೆ ಅಪಘಾತ ಮಾಡಿಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ. ಕಾರು ಚಾಲಕ ಅಪಘಾತ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಕಾರು ಚಲಾಯಿಸುವಾಗ ಮಾದಕ ವಸ್ತು ಸೇವಿಸಿದ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ನಗರ ಠಾಣೆಯ ಪೊಲೀಸರು ಅಪಘಾತ ನಡೆಸಿದ ಕಿಯಾ ಕಾರನ್ನು ವಶಕ್ಕೆ ಪಡೆದು ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಘಟನಾ ಸಂಬಂಧ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ನಗರ ವ್ಯಾಪ್ತಿಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಬೈಕ್ ವೀಲಿಂಗ್ ಮಾಡುವುದು, ಅಡ್ಡ ದಿಡ್ಡು ಕಾರು ಚಲಾಯಿಸುವುದು ಕೃತ್ಯಗಳು ಜರುಗುತ್ತಿದ್ದು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಪೋಲಿಸ್ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.