ಸಂವಿಧಾನ ಮಹತ್ವ ಮತ್ತು ಸಂವಿಧಾನದ ಕುರಿತು ಅರಿವು ಮೂಡಿಸುವ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಇಂದು ಬಾಳ್ಳುಪೇಟೆ ಗ್ರಾಮ ಪಂಚಾಯತ್ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಗುರುವಾರ ಬೆಳಿಗ್ಗೆ ಕುನಿಗನಹಳ್ಳಿ ಗ್ರಾಮ ಪಂಚಾಯತಿಯಿಂದ ಕಾರ್ಯಕ್ರಮ ಮುಗಿಸಿದ ನಂತರ ಬಾಳ್ಳುಪೇಟೆಗೆ ಆಗಮಿಸಿದ ರಥವನ್ನು ಬನವಾಸೆ ಗ್ರಾಮದ ಬಳಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕೋರಲಾಯಿತು.ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳ ಜೊತೆ ರಥವು ಸಂಚಾರ ನೆಡೆಸಿತು.
ಈ ವೇಳೆ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಯತೀಶ್ ಮಾತನಾಡಿ ,ಸಂವಿಧಾನವು ನಮ್ಮ ದೇಶದ ಸರ್ವೊಚ್ಛ ಕಾನೂನಾಗಿದ್ದು, ಇದರ ಅಡಿಯಲ್ಲಿ ಇತರೆ ಎಲ್ಲಾ ಕಾನೂನುಗಳು ಬರುತತಿವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸು ವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವನ್ನು ಅರಿತುಕೊಳ್ಳುವುದರಿಂದ ದೇಶಕ್ಕೆ ಒಳಿತಾಗುತ್ತದೆ. ಯುವ ಪೀಳಿಗೆ ಸಂವಿಧಾನದ ಬಗ್ಗೆ ಜ್ಞಾನ ಹೊಂದುವುದು ಅತೀ ಅವಶ್ಯಕ ಎಂದರು.
ಬಾಳ್ಳುಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ಕೃಷ್ಣಮೂರ್ತಿ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾವು ತಾಲೂಕಿನದ್ಯಂತ ಸಂಚರಿಸಿ, ಸಾರ್ವಜನಿಕರಲ್ಲಿ ಸಂವಿಧಾನದ ಆಶಯ ಹಾಗೂ ಮೌಲ್ಯಗಳ ಕುರಿತು ಮಾಹಿತಿ ನೀಡುತ್ತಾ ಸಾಗುತ್ತದೆ. ಸಮಾನತೆಯನ್ನು ಆಡಳಿತದ ತತ್ವವಾಗಿ ಸ್ವೀಕರಿಸಬೇಕು. ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸುವುದರೊಂದಿಗೆ ಮೂಢನಂಬಿಕೆಯಿಂದ ಹೊರಬಂದು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಕೃಷ್ಣ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದಮೂರ್ತಿ,ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಹಾಗೂ ನೋಡಲ್ ಅಧಿಕಾರಿ ಮುರುಗೇಶ್, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಹರೀಶ್, ಗ್ರಾಪಂ ಉಪಾಧ್ಯಕ್ಷ ಎಚ್. ಎಂ ಸ್ವಾಮಿ, ಪಿಡಿಒ ಸೋಮೇಗೌಡ, ಕಾರ್ಯದರ್ಶಿ ಶೇಖರ್ ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು, ವಿವಿಧ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು . ವಿವಿಧ ಶಾಲೆಗಳ ವಿದ್ಯಾರ್ಥಿಗಳು,ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿರಿದ್ದರು.