ಸಂವಿಧಾನ ಪೀಠಿಕೆ ಜಾಥಕ್ಕೆ ಪ್ರತಿ ಗ್ರಾ.ಪಂಯಲ್ಲೂ ಅದ್ದೂರಿ ಸ್ವಾಗತ: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ;ತಾಲೂಕಿನಲ್ಲಿ ಸಂಚರಿಸಲಿರುವ ಸಂವಿಧಾನ ಪೀಠಿಕೆ ಜಾಥಕ್ಕೆ ತಾಲೂಕಿನ ಎಲ್ಲಾ ಗಾಮಪಂಚಾಯತ್‌ಗಳು ಆದ್ದೂರಿ ಸ್ವಾಗತ ಕೋರುವಂತೆ ಶಾಸಕ ಸಿಮೆಂಟ್ ಮಂಜು ಸೂಚಿಸಿದರು.
ಮಂಗಳವಾರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಂವಿಧಾನ ಪೀಠಿಕೆ ಜಾಥ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ
ಫೆಬ್ರವರಿ 6 ರಿಂದ 11 ರವರಗೆ ಜಾಥ ಸಂಚರಿಸಲಿದ್ದು ತಾಲೂಕಿನ ಎಲ್ಲ ಗ್ರಾ.ಪಂಗಳಲ್ಲಿ ಜಾಥಕ್ಕೆ ಸಕಲ ಗೌರವಗಳೊಂದಿಗೆ ಸ್ವಾಗತಕೋರಬೇಕು. ತಾಲೂಕಿನಲ್ಲಿ ಐದು ದಿನಗಳ ಕಾಲ ಸಂಚರಿಸಲಿರುವ ಜಾಥ ಪ್ರತಿ ದಿನ ನಾಲ್ಕರಿಂದ ಐದು ಗ್ರಾ.ಪಂಗಳಲ್ಲಿ ಸಂಚರಿಸಲಿದೆ. ಅಂತಿಮ ದಿನ ಪಟ್ಟಣದ ಹಳೇ ತಾಲೂಕು ಕಚೇರಿ ಅವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮ ಸಹ ಆದ್ದೂರಿಯಾಗಿ ಆಯೋಜನೆ ಮಾಡಬೇಕು ಎಂದು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.
ಪೂರ್ವಬಾವಿ ಸಭೆಗೆ ಶಾಸಕ ಸಿಮೆಂಟ್ ಮಂಜು ತುಸು ವಿಳಂಭವಾಗಿ ಆಗಮಿಸಿದರು ಎಂಬ ಕಾರಣ ನೀಡಿ ಶಾಸಕರು ಸಭೆಗೆ ಆಗಮಿಸಿದ ವೇಳೆ ಕೆಲವು ದಲಿತ ಮುಖಂಡರು ಶಾಸಕರು ಉದ್ದೇಶ ಪೂರ್ವಕವಾಗಿ ಸಭೆಗೆ ನಿಧಾನವಾಗಿ ಬಂದಿದ್ದಾರೆಂದು ಆರೋಪಿಸಿ ಸಭೆ ಬಹಿಷ್ಕಾರಕ್ಕೆ ಮುಂದಾದರು. ಆಗ ಶಾಸಕರು ಮಾತನಾಡಿ ನಾನು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೀಡಿದ ಸನದಿಂದ ಮೀಸಲಾತಿ ಪ್ರಯೋಜನ ಪಡೆದು ಶಾಸಕನಾಗಿದ್ದೇನೆ. ದಿನದ 18 ಗಂಟೆಗೂ ಹೆಚ್ಚು ಕಾಲ ಜನರ ಜೊತೆ ಇರುತ್ತೇನೆ. ಪಟ್ಟಣದಲ್ಲಿ 8 ಜನರಿಗೆ ನಾಯಿ ಕಚ್ಚಿದ್ದರಿಂದ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ. ನನಗೆ ಸಭೆಗೆ ತಡವಾಗಿ ಬರುವ ಯಾವುದೆ ಉದ್ದೇಶವಿಲ್ಲ ಎಂದು ಹೇಳಿದ ಮೇಲೆ ದಲಿತ ಮುಖಂಡರು ಸುಮ್ಮನಾದರು.
ಪೂರ್ವಭಾವಿ ಸಭೆಯಲ್ಲಿ ಡಿವೈಎಸ್‌ಪಿ ಪ್ರಮೋದ್ ಕುಮಾರ್ ತಾಪಂ ಇಒ ರಾಮಕೃಷ್ಣ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಆನಂದಮೂರ್ತಿ ಮುಂತಾದವರಿದ್ದರು.