ಗಾಂಜಾ ವ್ಯಸನಿಗಳಿಂದ ಬೆದರಿಕೆ: ಪೋಲಿಸರ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ.
ಸಕಲೇಶಪುರ: ತಾಲೂಕಿನಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದು ಇವರ ವಿರುದ್ದ ಪೋಲಿಸರು ಕ್ರಮ ಕೈಗೊಳ್ಳದಿರುವುದರಿಂದ ಜನಸಾಮಾನ್ಯರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಆಕೊ್ರೀಷ ವ್ಯಕ್ತಪಡಿಸಿದರು.
ಪಟ್ಟಣದ ಅಶೋಕ ರಸ್ತೆಯಲ್ಲಿರುವ ನಗರ ಠಾಣೆ ಪೋಲಿಸ್ ಮುಂಭಾಗ ಸೇರಿದ ಬಿಜೆಪಿ ಮುಖಂಡರು ಹಾಗೂ ಕ್ಯಾನಹಳ್ಳಿ ಗ್ರಾಮಸ್ಥರು ಪೋಲಿಸರ ವಿರುದ್ದ ಕೆಲ ನಿಮಿಷಗಳ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ವಳಲಹಳ್ಳಿ ಅಶ್ವಥ್ ಮಾತನಾಡಿ ತಾಲೂಕಿನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಹಾವಳಿ ವಿಪರೀತವಾಗಿದೆ. ಗಾಂಜಾ ವ್ಯಸನಿಗಳು ತಾಲೂಕಿನ ಎಲ್ಲಾ ಭಾಗಗಳಲ್ಲೂ ಇದ್ದಾರೆ. ಕೆಲವು ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಗಾಂಜಾ ವ್ಯಸನಿಗಳ ಅಡ್ಡೆಯಾಗಿದೆ. ಗಾಂಜಾ ವ್ಯಸನದ ಜೊತೆಗೆ ಮದ್ಯಪಾನವನ್ನು ಸಹ ಇವರು ಮಾಡುತ್ತಾರೆ. ಗಾಂಜಾ ವ್ಯಸನಿಗಳು ದಾಂದಲೆ ಮಾಡುವಾಗ ಸಾರ್ವಜನಿಕರು ಇದನ್ನು ಕೇಳಲು ಹೋದರೆ ಮದ್ಯದ ಬಾಟಲಿಗಳನ್ನು ಒಡೆದು ಹೆದರಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರು ಗಾಂಜಾ ವ್ಯಸನಿಗಳ ವಿರುದ್ದ ದೂರು ಕೊಡಲು ಅಂಜುವಂತಾಗಿದೆ. ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಕೆಲವು ಗಾಂಜಾ ವ್ಯಸನಿಗಳು ಮದ್ಯದ ಬಾಟಲ್‌ಗಳನ್ನು ಬಿಸಾಡಿದ್ದು ಇದನ್ನು ಗ್ರಾಮದ ಯುವಕನೋರ್ವ ಕೇಳಿದ್ದಾನೆ. ಇದನ್ನು ನೆಪವಾಗಿಟ್ಟುಕೊಂಡ ವ್ಯಸನಿಗಳು ಇಂದು ಆ ಯುವಕ ಪಟ್ಟಣಕ್ಕೆ ಬಂದಾಗ ಆತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂಧರ್ಭದಲ್ಲಿ ಇತರ ಗ್ರಾಮಸ್ಥರು ಅಲ್ಲಿದ್ದರಿಂದ ಆತನ ಮೇಲೆ ಹಲ್ಲೆಯಾಗುವುದು ತಪ್ಪಿದೆ. ಇದನ್ನು ನಗರ ಠಾಣೆಯಲ್ಲಿ ದೂರು ನೀಡಲು ಹೋದರೆ ಇಲ್ಲಿ ದೂರು ಸ್ವೀಕಾರವಾಗುವುದಿಲ್ಲ, ಗ್ರಾಮಾಂತರ ಠಾಣೆಯಲ್ಲಿ ದೂರು ಕೊಡಿ ಎಂದು ಪೋಲಿಸರು ಹೇಳುತ್ತಾರೆ.ತಾಲೂಕಿನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಪೂರೈಕೆ ಸಂಪೂರ್ಣವಾಗಿ ನಿಲ್ಲಬೇಕು ಹಾಗೂ ಗಾಂಜಾ ವ್ಯಸನಿಗಳ ವಿರುದ್ದ ಪೋಲಿಸರು ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕಿನಲ್ಲಿ ಮುಂದೆ ಆಗುವ ಅನಾಹುತಗಳಿಗೆ ಪೋಲಿಸ್ ಇಲಾಖೆಯ ನೇರ ಹೊಣೆಯಾಗಿರುತ್ತದೆ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಕ್ಯಾಮನಹಳ್ಳಿ ರಾಜ್‌ಕುಮಾರ್,ಬೆಳ್ಳಿ, ತಿರುಮಲ ಮುಂತಾದವರು ಹಾಜರಿದ್ದರು.