ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕ ಸಿಮೆಂಟ್ ಮಂಜುರವರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆರವರಿಗೆ ಮನವಿ.
ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಸಿಮೆಂಟ್ ಮಂಜು ಅರಣ್ಯ ಸಚಿವ ಈಶ್ವರ್ ಖಂಡ್ರೆರವರಿಗೆ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆರವರನ್ನು ಭೇಟಿ ಮಾಡಿದ ಶಾಸಕರು ಮನವಿ ಮಾಡಿ ಕ್ಷೇತ್ರದಾದ್ಯಂತ ಕಾಡಾನೆ ದಾಳಿಯಿಂದ ಸಾವು ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಕುರಿತು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲದಿನಗಳ ಹಿಂದಷ್ಟೆ ಕಾಡಾನೆ ದಾಳಿಯಿಂದ ಅಮಾಯಕ ಕಾಫಿ ಬೆಳೆಗಾರರು ಮೃತಪಟ್ಟಿದ್ದಾರೆ.ಆ ಸಂಧರ್ಭದಲ್ಲಿ ಕಾಡಾನೆ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸ್ಥಳೀಯ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸುವಂತೆ ಹಾಗೂ ಪುಂಡ ಕಾಡಾನೆಗಳನ್ನು ಶೀಘ್ರವಾಗಿ ಹಿಡಿಯುವಂತೆ ಪ್ರತಿಭಟನಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೆ ಸಭೆ ಮಾಡಲು ದಿನಾಂಕ ನಿಗದಿ ಮಾಡಬೇಕು ಹಾಗೂ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲು ಯೋಜನೆ ರೂಪಿಸಬೇಕು ಹಾಗೂ ಪುಂಡ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಶೀಘ್ರವಾಗಿ ಆರಂಭಿಸಬೇಕು ಎಂದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಈಗಾಗಲೆ ಭದ್ರ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಮ ಮಾಡಲು ಯೋಜನೆ ಮಾಡಲಾಗಿದ್ದು ಅಲ್ಲದೆ ಕಾಡಾನೆ ಸಮಸ್ಯೆ ಕುರಿತು ಶೀಘ್ರದಲ್ಲಿ ರೈತರು, ಬೆಳೆಗಾರರ ಸಂಘಟನೆಗಳು, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಾಡಲು ದಿನಾಂಕ ನಿಗದಿ ಮಾಡಲಾಗುವುದು ಎಂದಿದ್ದಾರೆ.