ಸಕಲೇಶಪುರ: ರಸ್ತೆ ಸಂಪರ್ಕ ಸುಧಾರಣೆ – ಆರ್ಥಿಕ ಬೆಳವಣಿಗೆಗೆ ವೇಗ ನೀಡಲು ಸಾಧ್ಯ – ಶಾಸಕ ಸಿಮೆಂಟ್ ಮಂಜು
3 ಕೋಟಿ ರೂ ಗಳ ರಸ್ತೆ ಕಾಮಗಾರಿ ಗೆ ಭೂಮಿ ಪೂಜೆ
ಸಕಲೇಶಪುರ: ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮಗೊಂಡರೆ ಆರ್ಥಿಕ ಬೆಳವಣಿಗೆಯೂ ವೇಗ ಪಡೆಯಲಿದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಪ್ಲಾಂಟರ್ಸ್ ಕ್ಲಬ್ ಮುಂಭಾಗದಲ್ಲಿ ಸಿಆರ್‌ಎಫ್ ಅನುದಾನದಡಿ ನಿರ್ಮಾಣವಾಗುತ್ತಿರುವ ಸುಮಾರು 3 ಕೋಟಿ ರೂ ವೆಚ್ಚ ದ 3.9 ಕಿಮೀ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಾಳೆಗದ್ದೆ – ರಾಷ್ಟ್ರೀಯ ಹೆದ್ದಾರಿ 75 ಸಂಪರ್ಕಿಸುವ ಸಿದ್ದಾಪುರದವರಿಗಿನ ರಸ್ತೆ ಕಾಮಗಾರಿಯನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಕೊಡಗು ಸಂಪರ್ಕಿಸುವ ದಾರಿ ಸುಮಾರು 8 ರಿಂದ 10 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ಈ ಭಾಗದ ಜನರು ಕಳೆದ ಎರಡು ದಶಕಗಳಿಂದ ರಸ್ತೆ ಅಭಿವೃದ್ಧಿಗೆ ಒತ್ತಾಯಿಸುತ್ತಿದ್ದರು. ವಾಹನ ಸಂಚಾರ ಹೆಚ್ಚುತ್ತಿರುವುದರಿಂದ ಉತ್ತಮ ರಸ್ತೆ ಅಗತ್ಯವಾಗಿತ್ತು. ಮಳೆಯ ಸಮಯದಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ಮಾಡಬೇಕು ಎಂಬುದರತ್ತ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆ ವೇಳೆ ಈ ಭಾಗದ ಜನರು ರಸ್ತೆ ನಿರ್ಮಾಣದ ಬೇಡಿಕೆ ಮುಂದಿಟ್ಟಿದ್ದರು. ಅದನ್ನು ಪರಿಗಣಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಮನೆಯ ಮುಂಭಾಗದ ಜಾಗವನ್ನು ಬಿಟ್ಟುಕೊಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಮೋಹನ್, ಪ್ರದೀಪ್, ವನಜಾಕ್ಷಿ, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಮತ್ತು ಇತರರು ಹಾಜರಿದ್ದರು.