ಆಲೂರು : ಗ್ರಾಮೀಣ ಸಂಸ್ಕೃತಿ ಉಳಿದರೆ ಕುಟುಂಬಗಳಲ್ಲಿ ಬಾಂಧವ್ಯಗಳು ಗಟ್ಟಿಯಾಗಿ ಉಳಿಯುತ್ತವೆ ಆಧುನಿಕ ಭರಾಟೆಯಲ್ಲಿ ನಮ್ಮ ನಾಡಿನ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಇಂದಿನ ಯುವಜನರು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಗರ ಬಡಿದಂತಾಗಿದೆ. ಎರಡು-ಮೂರು ದಶಕಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ಉಪಯೋಗಿಸುತ್ತಿದ್ದ ಕೃಷಿ ಪರಿಕರಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡುತ್ತಿರುವುದು, ಮೂಲ ಸಂಸ್ಕೃತಿಗೆ ನಾವು ಮರಳಿ ಹೋಗುತ್ತೇವೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಮೂಲ ಸಂಸ್ಕೃತಿ ಉಳಿದರೆ ಕುಟುಂಬಗಳಲ್ಲಿ ಬಾಂಧವ್ಯತೆ ಹೆಚ್ಚಾಗುತ್ತದೆ. ಆದುನಿಕ ಸಂಸ್ಕೃತಿಗೆ ಹೆಚ್ಚು ತಲೆಬಾಗದೆ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಲು ಪ್ರತಿಯೊಬ್ಬರೂ ಪ್ರಯತ್ನ ಮಾಡಬೇಕು ಜನರಿಂದ ಜನರಿಗಾಗಿ ಜನರಿಗೋಸ್ಕರ ರಚನೆಯಾದ ಸಾಹಿತ್ಯ ಜನಪದ ಕಲೆಯಾಗಿದೆ. ಹಳ್ಳಿಯ ಹಬ್ಬ, ಮದುವೆ, ಭಕ್ತಿ ಪ್ರಧಾನ ಮತ್ತಿತರರು ಸಮಾರಂಭದಲ್ಲಿ ಜನರು ಹಾಡುವ ಮೂಲಕ ಮನರಂಜನೆ ನೀಡುತ್ತಿದ್ದರು ಎಂದರು.
ಜನಪದ ಸಾಹಿತಿ ಹಂಪನಹಳ್ಳಿ ತಿಮೇಗೌಡ ಮಾತನಾಡಿ ಇಂದಿನ ಪಾಶ್ಚಾತ್ಯ ಶೈಲಿಯ ಆಧುನಿಕ ಜೀವನದಲ್ಲಿ ದೇಸೀ ಸಂಸ್ಕೃತಿಯು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಜನಪದ ಸಾಹಿತ್ಯ, ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ, ಜನಾಂಗೀಯ ಪಾಕಪದ್ಧತಿ (ದೇಸೀ ಆಹಾರ), ದೇಸೀ ಉಡುಗೆ-ತೊಡುಗೆ, ದೇಸೀ ನೃತ್ಯ-ಸಂಗೀತ, ಆಟ, ಈ ಎಲ್ಲವನ್ನು ಒಳಗೊಂಡಿರುವುದೇ ಜಾನಪದವೆಂದು ಹೇಳಬಹುದು.
ಕಾಲೇಜು ಪ್ರಾಂಶುಪಾಲ ಟಿ.ಪಿ.ಪುಟ್ಟರಾಜು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಉತ್ತಮ ಗುರಿ ಹೊಂದಿರಬೇಕು. ಗುರಿ ಉತ್ತಮವಾಗಬೇಕಾದರೆ ಉತ್ತಮ ಸಂಸ್ಕೃತಿಯನ್ನು ಹೊಂದಿರಬೇಕು. ಗುರು ಹಿರಿಯನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮನ್ನಡೆದರೆ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದ ಕಾಲೇಜಿನವರೆಗೆ ಜೋಡೆತ್ತಿನ ಗಾಡಿ, ಗ್ರಾಮೀಣ ಕುಟುಂಬದ ಪರಿಕರಗಳು, ಕೃಷಿ ಉಪಕರಣಗಳನ್ನೊಳಗೊಂಡ ಮೆರವಣಗೆ ನಡೆಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಟಿ. ಪಿ. ಪುಟ್ಟರಾಜು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ವಿದ್ವಾಂಸ ಹೆಚ್. ಎಂ. ತಿಮ್ಮೇಗೌಡ, ಕಲಾವಿದೆ ಹೆಚ್. ವೇದಾವತಿ, ಪ್ರಾಧ್ಯಾಪಕರಾದ ಕೆ. ಎನ್. ರಮೇಶ್, ಹೆಚ್. ಕೆ. ವೆಂಕಟೇಶ್ ಉಪಸ್ಥಿತರಿದ್ದರು.