ಕುನಿಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆ.ಎಸ್ ಪ್ರಕಾಶ್ ಅವಿರೋಧ ಆಯ್ಕೆ.
ಸಕಲೇಶಪುರ: ತಾಲ್ಲೂಕಿನ ಬೆಳಗೋಡು ಹೋಬಳಿ ಕುನಿಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕುನಿಗಹಳ್ಳಿ ಸಾಮಾನ್ಯ ಕ್ಷೇತ್ರದ ಕೆ.ಎಸ್ ಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷರಾಗಿದ್ದ ಹೊಸಗದ್ದೆ ಕ್ಷೇತ್ರದ ಸಂಗಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಕುನಿಗನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಕೆ. ಎಸ್ ಪ್ರಕಾಶ್ ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ಅರವಿಂದ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಪ್ರಕಾಶ್ ರವರಿಗೆ ಅಧಿಕಾರ ವಹಿಸಿಕೊಟ್ಟರು.
ಮಾಜಿ ಅಧ್ಯಕ್ಷ ಸಂಗಪ್ಪ, ಉಪಾಧ್ಯಕ್ಷೆ ಶಶಿಕಲಾ ಸೇರಿದಂತೆ 6 ಮಂದಿ ಸದಸ್ಯರು ಹಾಜರಿದ್ದರು. ಉಳಿದ 5 ಜನ ಸದಸ್ಯರು ಗೈರು ಹಾಜರಾಗಿದ್ದರು.ಇದೆ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಜೆಡಿಎಸ್ ಹಾಗೂಕಾಂಗ್ರೆಸ್ ನ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಪಂಚಾಯತಿ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ನೆಡೆಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ. ಶಾಸಕರಾದ ಸಿಮೆಂಟ್ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಹೆಚ್ಚು ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಕ್ಯಾಮನಹಳ್ಳಿ ರಾಜಕುಮಾರ್, ದೊಡ್ಡದಿಣ್ಣೆ ಜೈ ಪ್ರಕಾಶ್, ಕಟ್ಟೆಗದ್ದೆ ನಾಗರಾಜ್,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಕಾಂಗ್ರೆಸ್ ಮುಖಂಡ ಹೆಗ್ಗೋವೆ ಪುಟ್ಟರಾಜು,ಸನಾತನ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಸಂಘಿ, ಪದಾಧಿಕಾರಿಗಳು ಸೇರಿದಂತೆ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.