ಸಕಲೇಶಪುರ: ವಿಖಾಯ ವಿಜೇಲೆಂಟ್ ಎಸ್.ಕೆ.ಎಸ್.ಎಸ್. ಎಫ್ ಕಾರ್ಯಕರ್ತರಿಂದ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ
ಸಕಲೇಶಪುರ: ಪವಿತ್ರ ರಂಜಾನ್ ಮಾಸದ ಪ್ರಯುಕ್ತ, ವಿಖಾಯ ವಿಜೇಲೆಂಟ್ ಎಸ್.ಕೆ.ಎಸ್.ಎಸ್. ಎಫ್ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಉಪವಾಸಿಗಳು ಸುಗಮವಾಗಿ ಉಪವಾಸ ಮುಗಿಸಬಹುದು ಎಂಬ ಉದ್ದೇಶದಿಂದ ಇಫ್ತಾರ್ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ವಿಖಾಯದ ಕಾರ್ಯಕರ್ತ ಸಮದ್ ಫೈಝಿ, ಹೇಳಿದರು.
ಪಟ್ಟಣದ ಹೊರ ವರ್ತುಲ ರಸ್ತೆ ಕೆಂಪೇಗೌಡ ಪ್ರತಿಮೆ ಸಮೀಪ ಕಿತ್ತುಗಳನ್ನು ವಿತರಿಸಿ ಮಾತನಾಡಿ, ಈ ಮಾನವೀಯ ಸೇವಾ ಕಾರ್ಯ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಉಪವಾಸ ಮುಗಿಸಲು ತೊಂದರೆ ಆಗಬಾರದೆಂಬ ಕಾರಣಕ್ಕೆ ಈ ಸೇವೆಯನ್ನು ಪ್ರಾರಂಭಿಸಿದ್ದೇವೆ. ನಮಗೆ ಸೇವಾಧರ್ಮವೇ ಮುಖ್ಯ, ಎಸ್.ಕೆ.ಎಸ್.ಎಸ್.ಎಫ್.ನ ಮೂಲ ದ್ಯೇಯವೂ ಅದೇ— ವಿಜ್ಞಾನ, ವಿನಯ ಮತ್ತು ಸೇವೆ. ಪ್ರತಿದಿನ ಸುಮಾರು 50ರಿಂದ 100 ಮಂದಿ ಪ್ರಯಾಣಿಕರಿಗೆ ಇಫ್ತಾರ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಅವರ ಉಪವಾಸ ಮುಕ್ತಾಯ ಸುಗಮಗೊಳ್ಳುವಂತೆ ಸಹಾಯ ಮಾಡುತ್ತಿರುವುದಕ್ಕೆ ನಾವು ಹರ್ಷಿತರಾಗಿದ್ದೇವೆ ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಕ್ರಮಗಳು ರಾಜ್ಯದ ಅನೇಕ ಕಡೆಗಳಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗುಳಗಳಲೆ ಜಾಮಿಯ ಮಸೀದಿಯ ಅಧ್ಯಕ್ಷ ಕಾಸಿಂ ಗುಳಗಳಲೆ, ನಿಸಾರ್ ಸುಂಡೆಕೆರೆ, ಬದುರುದ್ದೀನ್ ಧಾರಿಮಿ, ಸುಲೇಮಾನ್ ಆನಿಮಹಲ್, ಉಮರ್ ಉಸ್ತಾದ್ ಸೇರಿದಂತೆ ಇನ್ನಿತರರು ಇದ್ದರು