ಸಕಲೇಶಪುರ: ಮಹಿಳಾ ದಿನಾಚರಣೆಗೆ ಚಂಪಕನಗರ 13ನೇ ವಾರ್ಡಿನ ಮಹಿಳೆಯರಿಂದ ಅರ್ಥಪೂರ್ಣ ಆಚರಣೆ
ಸಕಲೇಶಪುರ: ಪಟ್ಟಣದ ಚಂಪಕನಗರ ಬಡಾವಣೆಯ 13ನೇ ವಾರ್ಡಿನ ಮಹಿಳೆಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಜಸಿಂತಾರವರು ಜ್ಯೋತಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಪಾತ್ರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ತಾಯಿ, ಸಹೋದರಿ, ಪತ್ನಿ ಸೇರಿದಂತೆ ಹಲವಾರು ಪಾತ್ರಗಳಲ್ಲಿ ಮಹಿಳೆ ಕುಟುಂಬದ ಬೆಳಕಾಗಿ ದುಡಿಯುತ್ತಾರೆ. ಮನೆಯ ಅರ್ಧ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ, ಶಿಕ್ಷಕಿ, ಇಂಜಿನಿಯರ್, ಪೈಲೆಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ನೈಪುಣ್ಯತೆಯನ್ನು ಸಾಬೀತುಪಡಿಸುತ್ತಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾರೆ. ಮಹಿಳೆಯರ ಈ ಸಾಧನೆಗೆ ಗೌರವ ಸೂಚಿಸುವುದಕ್ಕಾಗಿ ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡಿದರೆ, ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಕೊಡುಗೆ ಅಪಾರವಾಗಿದೆ. ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದು, ತಮ್ಮ ಬುದ್ಧಿಶಕ್ತಿಯಿಂದ ಸಾಧನೆ ಮಾಡಿರುವ ಅದೆಷ್ಟೋ ಮಹಿಳೆಯರು ಜಗತ್ತಿನಲ್ಲಿ ಕಾಣಸಿಗುತ್ತಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ 13ನೇ ವಾರ್ಡಿನ ಪುರಸಭಾ ಸದಸ್ಯೆ ಅನ್ನಪೂರ್ಣ, ಪುರಸಭೆಯ ಮಾಜಿ ಅಧ್ಯಕ್ಷೆ ಕೌಶಲ್ಯ ಲಕ್ಷ್ಮಣಗೌಡ, ಬಾಳುಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೌರಮ್ಮ ಹಾಗೂ ಇತರರು ಭಾಗವಹಿಸಿದ್ದರು.