ಸಕಲೇಶಪುರ: ಎನ್.ಎಚ್.ಎಂ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡುವಂತೆ ಆಗ್ರಹಿಸಿ ಎನ್.ಎಚ್.ಎಂ ಸಿಬ್ಬಂದಿಗಳು ಪಟ್ಟಣದ ಕ್ರಾರ್ಡ್ ಆಸ್ಪತ್ರೆ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್‌ರವರಿಗೆ ಮನವಿ ಸಲ್ಲಿಸದ ನಂತರ ಮಾತನಾಡಿದ ಎನ್.ಎಚ್.ಎಂ ಸಿಬ್ಬಂದಿಗಳು ಕಾಂಗ್ರೆಸ್ ಪಕ್ಷವು ಪುಣಾಳಿಕೆಯಲ್ಲಿ ಘೋಷಿಸಿದಂತೆ ಆರೋಗ್ಯ ಇಲಾಖೆಯ ಎನ್.ಎಚ್.ಎಂ ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಲು ಸರ್ಕಾರ ಗಮನ ಹರಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 28,258 ನೌಕರರು ಎನ್.ಎಚ್.ಎಂ ಯೋಜನೆ ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕಳೆದ 20 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ, ರಾಜ್ಯದಲ್ಲಿ ಕೊರೋನಾ ಮಹಾಮಾರಿಯನ್ನು ಕಟ್ಟಿ ಹಾಕುವಲ್ಲಿ ವಾರಿಯರ್ ಗಳಂತೆ ಕರ್ತವ್ಯ ನಿರ್ವಹಿಸಿದ್ದೇವೆ. ನಮ್ಮ ಎಲ್ಲಾ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಎನ್.ಎಚ್.ಎಂ ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಸಹ ಮನವಿ ಮಾಡಲಾಗಿದೆ. ಸರ್ಕಾರವೇ ಘೋಷಿಸಿದಂತೆ ನಮ್ಮನ್ನು ಖಾಯಂ ಮಾಡಬೇಕೆಂಬುದು ನಮ್ಮ ಬಹು ದಿನಗಳ ಏಕೈಕ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಮಾನ್ಯ ಆರೋಗ್ಯ ಸಚಿವರು ಸಭೆ ನಡೆಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರದಾನ ಕಾರ್ಯದರ್ಶಿಗಳಿಗೆ ನೌಕರರ ಖಾಯಂ ಕಡತ ಸಿದ್ಧಪಡಿಸಲು ಸೂಚಿಸಿರುತ್ತಾರೆ. ಅದರಂತೆ ಕಡತವು ರಚನೆಯಾಗಿ ಇಲಾಖೆಯ ಹಂತದಲ್ಲಿದೆ. ’ನುಡಿದಂತೆ ನಡೆಯುತ್ತಿರುವ ಘನ ಸರ್ಕಾರವು ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ನಿರ್ಣಯ ತೆಗೆದುಕೊಳ್ಳ ಬೇಕಾಗಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಎನ್.ಎಚ್.ಎಂ ಒಳಗುತ್ತಿಗೆ ನೌಕರರು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲು 17.08.2024 ರಿಂದ ಸಾಂಕೇತಿಕವಾಗಿ, ಶಾಂತಿಯುತವಾಗಿ ಸರ್ಕಾರದ ಗಮನ ಸೆಳೆಯಲು ಕೈಗೊಂಡಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎನ್.ಎಚ್.ಎಂ ಸಿಬ್ಬಂದಿಗಳಾದ ಡಾ. ಪ್ರಶಾಂತ್, ಮಧು , ಭೂಮಿಕಾ, ಸಂದ್ಯಾ ನಾದಿಯಾ, ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು