ಸಕಲೇಶಪುರ : ರಾತ್ರೋರಾತ್ರಿ ಮಲೆನಾಡು ಭಾಗಕ್ಕೆ ಚಿರತೆ ಬಿಡಲು ಅರಣ್ಯ ಇಲಾಖೆ ಪ್ಲಾನ್:ಗ್ರಾಮಸ್ಥರಿಂದ ತೀವ್ರ ವಿರೋಧ.
ಸಕಲೇಶಪುರ : ಮಲೆನಾಡು ಭಾಗವಾದ ಸಕಲೇಶಪುರದ ಈಗಾಗಲೇ ಕಾಡಾನೆ ಹಾವಳಿಯಿಂದ ಇಲ್ಲಿನ ರೈತರು ಬೆಳೆಗಾರರು ಗ್ರಾಮಸ್ಥರು ಕಂಗಾಲಾಗಿದ್ದು ಇದೀಗ ಚಿರತೆ ಹಾವಳಿ ಎದುರಿಸಲು ಸಜ್ಜಾಗುವ ಪರಿಸ್ಥಿತಿ ಎದ್ದು ಕಾಣುತ್ತಿದೆ.
ಹೌದು, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೆರೆಹಿಡಿದಂತಹ ಚಿರತೆಯನ್ನು ಅರಣ್ಯ ಇಲಾಖೆ ಮಲೆನಾಡು ಭಾಗಕ್ಕೆ ತಂದು ಬಿಡಲು ಪ್ಲಾನ್ ಮಾಡಿದ್ದು ಬುಧವಾರ ರಾತ್ರಿ ಇದೇ ರೀತಿ ಚಿರತೆಯನ್ನು ಬಿಡುವಾಗ ಗ್ರಾಮಸ್ಥರು ಚಿರತೆ ವಾಹನವನ್ನು ತಡೆದು ಪ್ರತಿಭಟನೆ ನಡೆಸುತ್ತಿರುವ ಘಟನೆ ನಡೆದಿದೆ ಬಯಲುಸೀಮೆಯಲ್ಲಿ ಉಪಟಳ ನೀಡುವ ಚಿರತೆಯನ್ನು ಪಶ್ಚಿಮ ಘಟ್ಟದ ಬಿಸಿಲೆ ರಕ್ಷಿತರಣ್ಯ ಭಾಗದಲ್ಲಿ ಬಿಡುತ್ತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ
ತಾಲೂಕಿನ ಬಿಸ್ಲೆ ಭಾಗಕ್ಕೆ ಇಂದು ಸಂಜೆ ಚಿರತೆಯನ್ನು ಬಿಡಲು ಯೋಜನೆ ರೂಪಿಸಿದ್ದ ಅರಣ್ಯ ಇಲಾಖೆಗೆ ಹೆತ್ತೂರು ಹೋಬಳಿಯ ವಣಗೂರು,ಕೂಡುರಸ್ತೆ ಸೇರಿದಂತೆ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಮಂಕನಹಳ್ಳಿ ಸಮೀಪ ನೂರಾರು ಗ್ರಾಮಸ್ಥರ ರಸ್ತೆ ತಡೆದು ಪ್ರತಿಭಟನೆ ನೆಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬರುವರೆಗೆ ವಾಹನ ಬಿಡುವುದಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯ ಇಲಾಖೆಯ ವಾಹನ ತಡೆದು ಯಾವುದೇ ಕಾರಣಕ್ಕೂ ಮಲೆನಾಡು ಭಾಗಕ್ಕೆ ಚಿರತೆ ಬಿಡಬಾರದೆಂದು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ಕೆಲ ತಿಂಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಸೆರೆಹಿಡಿದ ನರಹಂತಕ ಚಿರತೆಯನ್ನು ಮಲೆನಾಡು ಭಾಗಕ್ಕೆ ತಂದು ಬಿಟ್ಟಿದ್ದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿತ್ತು. ಆ ನರಹಂತಕ ಚಿರತೆ ಮಲೆನಾಡು ಭಾಗದಲ್ಲಿ ಹಲವಾರು ಜಾನುವಾರುಗಳನ್ನು ತಿಂದು ಹಾಕಿ ಆತಂಕ ಸೃಷ್ಟಿ ಮಾಡಿತ್ತು. ಆದ್ದರಿಂದ ರಾಜ್ಯದ ಇತರೆ ಕಡೆಗಳಲ್ಲಿ ಸೆರೆಹಿಡಿದ ಚಿರತೆಗಳನ್ನು ಮಲೆನಾಡು ಭಾಗಕ್ಕೆ ತಂದು ಬಿಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಾಡಾನೆ ಜೊತೆಗೆ ಚಿರತೆ ಹಾವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭಂದ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆಯನ್ನು ಮಲೆನಾಡು ಭಾಗಕ್ಕೆ ಬಿಡಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಶಾಸಕ- ಸಿಮೆಂಟ್ ಮಂಜು