ಸೆರೆ ಹಿಡಿದ ಚಿರತೆಯನ್ನು ಮಲೆನಾಡು ಭಾಗಕ್ಕೆ ಬಿಡಲು ಅರಣ್ಯ ಇಲಾಖೆ ಪ್ಲ್ಯಾನ್ : ಗ್ರಾಮಸ್ಥರ ಆಕ್ರೋಶ
ಸಕಲೇಶಪುರ : ಮಲೆನಾಡು ಭಾಗವಾದ ಸಕಲೇಶಪುರದ ಈಗಾಗಲೇ ಕಾಡಾನೆ ಹಾವಳಿಯಿಂದ ಇಲ್ಲಿನ ರೈತರು ಬೆಳೆಗಾರರು ಗ್ರಾಮಸ್ಥರು ಕಂಗಾಲಾಗಿದ್ದು ಇದೀಗ ಚಿರತೆ ಹಾವಳಿ ಎದುರಿಸಲು ಸಜ್ಜಾಗುವ ಪರಿಸ್ಥಿತಿ ಎದ್ದು ಕಾಣುತ್ತಿದೆ.
ಹೌದು, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸೆರೆಹಿಡಿದಂತಹ ಚಿರತೆಯನ್ನು ಅರಣ್ಯ ಇಲಾಖೆ ಮಲೆನಾಡು ಭಾಗಕ್ಕೆ ತಂದು ಬಿಡಲು ಪ್ಲಾನ್ ಮಾಡಿದ್ದು ಇದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಿಸ್ಲೆ ಭಾಗಕ್ಕೆ ಇಂದು ಸಂಜೆ ಚಿರತೆಯನ್ನು ಬಿಡಲು ಯೋಜನೆ ರೂಪಿಸಿದ್ದ ಅರಣ್ಯ ಇಲಾಖೆಗೆ ಹೆತ್ತೂರು ಹೋಬಳಿಯ ವಣಗೂರು,ಕೂಡುರಸ್ತೆ ಸೇರಿದಂತೆ ಇನ್ನಿತರ ಗ್ರಾಮಗಳ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ವಾಹನ ತಡೆದು ಯಾವುದೇ ಕಾರಣಕ್ಕೂ ಮಲೆನಾಡು ಭಾಗಕ್ಕೆ ಚಿರತೆ ಬಿಡಬಾರದೆಂದು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ಕೆಲ ತಿಂಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಸೆರೆಹಿಡಿದ ನರಹಂತಕ ಚಿರತೆಯನ್ನು ಮಲೆನಾಡು ಭಾಗಕ್ಕೆ ತಂದು ಬಿಟ್ಟಿದ್ದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿತ್ತು. ಆ ನರಹಂತಕ ಚಿರತೆ ಮಲೆನಾಡು ಭಾಗದಲ್ಲಿ ಹಲವಾರು ಜಾನುವಾರುಗಳನ್ನು ತಿಂದು ಹಾಕಿ ಆತಂಕ ಸೃಷ್ಟಿ ಮಾಡಿತ್ತು. ಆದ್ದರಿಂದ ರಾಜ್ಯದ ಇತರೆ ಕಡೆಗಳಲ್ಲಿ ಸೆರೆಹಿಡಿದ ಚಿರತೆಗಳನ್ನು ಮಲೆನಾಡು ಭಾಗಕ್ಕೆ ತಂದು ಬಿಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಾಡಾನೆ ಜೊತೆಗೆ ಚಿರತೆ ಹಾವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭಂದ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆಯನ್ನು ಮಲೆನಾಡು ಭಾಗಕ್ಕೆ ಬಿಡಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಶಾಸಕ- ಸಿಮೆಂಟ್ ಮಂಜು