ಅಂದು ದೇಶ ಸೇವೆ ಇಂದು ಸಮಾಜ ಸೇವೆ
ಮಾಜಿ ಸೈನಿಕ ಪಕ್ಷೇತರ ಅಭ್ಯರ್ಥಿಗೆ ಮತ ಕೊಡಿ: ಜೆ.ಡಿ. ಬಸವರಾಜು ಮನವಿ
ಸಕಲೇಶಪುರ : ದೇಶ ಕಾಯುವ ಸೈನಿಕನಿಗೆ ಮತ ಕೊಟ್ಟು ಭ್ರಷ್ಟಾಚಾರ ಮುಕ್ತ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮಾಜಿ ಸೈನಿಕ ಹಾಗೂ ಪಕ್ಷೇತರ ಅಭ್ಯರ್ಥಿ ಜೆ.ಡಿ. ಬಸವರಾಜ ಮನವಿ ಮಾಡಿದರು.
ಸಕಲೇಶಪುರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಅಭಿವೃದ್ಧಿ ಯಾಗಬೇಕೆಂದರೆ ರೈತ ಮತ್ತು ಯೋಧ ಅತ್ಯಂತ ಮುಖ್ಯವಾಗುತ್ತಾರೆ. ಇವರಿಬ್ಬರು ಸಮೃದ್ಧವಾಗಿ ಮತ್ತು ಸದೃಢವಾಗಿದ್ದರೇ ದೇಶ ಸುಭಿಕ್ಷವಾಗಿರುತ್ತದೆ. ನಾನು ದೇಶ ಕಾಯುವ ಪುಣ್ಯ ಕೆಲಸವನ್ನು ಮಾಡಿ ಬಂದವನು. ಭಾರತೀಯ ಸೇನೆಯ ಸೈನಿಕನಾಗಿ ದೇಶಕ್ಕಾಗಿ ನಾನು ಕುಟುಂಬವನ್ನು ಬಿಟ್ಟು ದೂರದ ಊರಲ್ಲಿ ಭಾರತೀಯ ಸೈನ್ಯದ ಸೈನಿಕನಾಗಿ ದೇಶಕ್ಕಾಗಿ ನಿಶ್ವಾರ್ಥ ಸೇವೆ ಮಾಡಿದ್ದು, ಬೇರೆ ರೂಪದಲ್ಲಿ ಸಾಮಾಜಿಕ ಸೇವೆ ಮಾಡುವುದಕ್ಕೆ ಸಿದ್ಧನಾಗಿದ್ದೇನೆ. ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಭಾರತದ ಭವಿಷ್ಯ ಭದ್ರವಾಗಿರಬೇಕೆಂದರೆ ನಮ್ಮ ಯುವ ಸಮಾಜ ಗಟ್ಟಿಯಾಗಿರಬೇಕು. ಯುವ ಸಮಾಜದಲ್ಲಿ ನಾಯಕತ್ವ, ದೇಶ ಪ್ರೇಮ, ಸಮಾಜ ಸೇವೆ ಮನೋಭಾವನೆ ಇರಬೇಕು ಎಂದರು. ಸಕಲೇಶಪುರವು ಒಂದು ಸುಂದರ ರಮಣೀಯ ಸ್ಥಳವಾಗಿದ್ದು ಇಲ್ಲಿಗೆ ಹೊರ ರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ಜೊತೆಗೆ ಈ ಭಾಗದಲ್ಲಿ ಉನ್ನತ ವಿಜ್ಞಾನ ಶಿಕ್ಷಣಕ್ಕಾಗಿ ತಾಲೂಕಿನಿಂದ ಹೊರಜಿಲ್ಲೆಗಳಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದು ನಾನು ಜನರ ಆಶೀರ್ವಾದದಿಂದ ಸಂಸದನಾದರೆ ತಾಲೂಕಿಗೆ ಸೈನ್ಸ್ ಕಾಲೇಜು ತರುವ ಮೂಲಕ ಇಲ್ಲಿನ ವಿಧ್ಯಾರ್ಥಿಗಳು ಹೊರ ಜಲ್ಲೆಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದನ್ನು ತಪ್ಪಿಸಿ ಅನುಕೂಲ ಮಾಡಿಕೊಡುತ್ತೇನೆ ಎಂದರು.. ನಮ್ಮಲ್ಲಿ ಸೇನೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಹೊತ್ತವರು ಸಾಕಷ್ಟು ಮಂದಿ ಇದ್ದಾರೆ. ಕಾಲೇಜುಗಳು ಕೆಲಸಕ್ಕೆಂದು ಮತ್ತೆ ಬೇರಾವುದೋ ದೊಡ್ಡ ಸಿಟಿ ಹುಡುಕಿಕೊಂಡು ಹೋಗಬೇಕಾಗಿರುವ ಪರಿಸ್ಥಿತಿಯಿದೆ. ಈ ಸ್ಥಿತಿ ಬದಲಾಗಬೇಕಿದೆ. ನಮ್ಮ ಹಾಸನದಲ್ಲಿ ಐಟಿ ಕಂಪನಿಗಳು ಬಂದು ನೆಲೆಸಬೇಕು. ನಮ್ಮ ಹಾಸನ ಕೂಡ ಒಂದು ಮಿನಿ ಐಟಿ ಹಬ್ ಆಗಬೇಕಿದೆ. ಕೇವಲ ಐಟಿ ಮಾತ್ರವಲ್ಲ. ನಮ್ಮಲ್ಲಿ ಬೇರೆ ಎಲ್ಲ ರೀತಿಯ ಉದ್ಯೋಗಾವಕಾಶಗಳೂ ಸೃಷ್ಟಿಯಾಗಬೇಕು. ನಮ್ಮ ಕ್ಷೇತ್ರದಲ್ಲಿ ಯಾವೊಬ್ಬ ಯುವಕ, ಯುವತಿಯೂ ಕೆಲಸ ಸಿಗದೆ ಪರದಾಡುವಂತೆ ಇರಬಾರದು ಎಂದು ಅಭಿಪ್ರಾಯಪಟ್ಟರು.
ನಮ್ಮ ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ದುಡಿಯುವ ಬೆಳೆ ಇಲ್ಲಿನ ಕಾಡಾನೆ ಹಾವಳಿಯಿಂದ ಸಾಕಷ್ಟು ಹಾಳಾಗುತ್ತಿದ್ದು ಪ್ರತಿದಿನ ಭಯದಲ್ಲೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದುವರೆಗು ಜನರಿಂದ ಓಟು ಪಡೆದು ಅಧಿಕಾರ ಅನುಭವಿಸಿದ ರಾಜಕೀಯ ಪಕ್ಷಗಳ ನಾಯಕರು ಈ ಕಾಡಾನೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದು ನನಗೊಂದು ಈ ಬಾರಿ ಪಕ್ಷೇತರ ಅಭ್ಯರ್ತಿಯಾದ ನನ್ನ ಗುರುತಾದ ಕ್ರಮ ಸಂಖ್ಯೆ 10 ರ ವಜ್ರದ ಗುರುತಿಗೆ ತಮ್ಮ ಅಮೂಲ್ಯವಾದ ಮತನೀಡಿ ನನ್ನನ್ನು ಈ ಚುನಾವಣೆಯಲ್ಲಿ ಆಯ್ಕೆಮಾಡಬೇಕೆಂದು ವಿನಂತಿ ಮಾಡಿದರು.
ನಂತರ ಮಾತನಾಡಿದ ಅವರು ರೈತರು ಬೆಳೆದ ಬೆಳೆಗಳಿಗೆ ಯಾವುದೋ ಮಧ್ಯವರ್ತಿಗಳ ಕೈಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ಮಧ್ಯವರ್ತಿಗಳು ಲಾಭ ಪಡೆಯುತ್ತಾರೆಯೇ ಹೊರತು ರೈತರು ಲಾಭ ಪಡೆಯುವುದಿಲ್ಲ. ರೈತರು ಬೆಳೆಯುವ ಬೆಳೆಯನ್ನೇ ಅವರು ಬೇರೆ ಬೇರೆ ಉತ್ಪನ್ನಗಳಾಗಿಸಿ ಅದರಿಂದ ಸಾಕಷ್ಟು ಲಾಭ ಪಡೆಯುತ್ತಾರೆ. ಆದರೆ ಆ ಕಲಸ ನಮ್ಮಲ್ಲೇ ಆಗಬೇಕು. ದೂರದ ಊರಿಗೆ ನಾವು ಬೆಳೆದ ಬೆಳೆ ಕಳುಹಿಸಿ ಕೊನೆಗೆ ಅದನ್ನೇ ಬೇರೆ ಉತ್ಪನ್ನದ ರೂಪದಲ್ಲಿ ದುಬಾರಿ ಬೆಲೆಗೆ ಕೊಂಡುಕೊಳ್ಳುವಂತಿರಬಾರದು. ನಮ್ಮ ಬೆಳೆ ನಮ್ಮಲ್ಲೇ ಉತ್ಪನ್ನವಾಗಬೇಕು. ನಿಸ್ವಾರ್ಥವಾಗಿ ದುಡಿಯುವುದು ಮಾತ್ರವಲ್ಲದೆ ಸಮಾಜವನ್ನೂ ಅದೇ ರೀತಿಯಲ್ಲಿ ಬದಲಾಗಿಸುವ ಅವಶ್ಯಕತೆಯಿದೆ. ಮೊದಲು ನಮ್ಮ ಹಾಸನ ಭ್ರಷ್ಟಾಚಾರ ಮುಕ್ತವಾಗಬೇಕು. ನಂತರ ನಮ್ಮ ರಾಜ್ಯ, ನಂತರ ನಮ್ಮ ದೇಶ. ಹೀಗೆ ಪ್ರತಿ ಕ್ಷೇತ್ರವೂ ಭ್ರಷ್ಟಾಚಾರ ಮುಕ್ತವಾಗಬೇಕು. ಅದರತ್ತ ಕೆಲಸ ಮಾಡುವುದಕ್ಕೆ ನಾನು ಭದ್ಧವಾಗಿದ್ದೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರಾದ ರಂಗನಾಥ್, ಕಾಳೇಗೌಡ, ಬಸವೇಗೌಡ ಹರೀಶ್ ,ಧರ್ಮಪ್ಪ, ಮೋಹನ್ ರಾಜ್ ಇತರರು ಉಪಸ್ಥಿತರಿದ್ದರು.