ಸಕಲೇಶಪುರ : ಅಪರಿಚಿತ ವಾಹನ ಡಿಕ್ಕಿ : ಜಿಂಕೆ ಸಾವು
ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮದ ಬಳಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬುಧುವಾರ ಮುಂಜಾನೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಿಂಕೆಯೊಂದು ಮೃತಪಟ್ಟಿದೆ.
ಬಾಗೆ ಗ್ರಾಮ ಪಂಚಾಯತಿ ಮುಂಭಾಗ ಬೆಳಿಗ್ಗೆ 4:30 ರ ಸಮಯದಲ್ಲಿ ಸುಮಾರು 5-6 ವರ್ಷ ಪ್ರಾಯದ ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆ ದಿದ್ದರಿಂದ ಜಿಂಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಾದ ಮಾಸುವಳ್ಳಿ ಚಂದ್ರು ಎಂಬುವವರು ರಸ್ತೆಯಲ್ಲಿ ಬಿದಿದ್ದ ಜಿಂಕೆ ಕಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ಜಿಂಕೆ ಶವವನ್ನು ವಶಕ್ಕೆ ಪಡೆದರು. ಹಾಲೆ ಬೇಲೂರು ಸಮೀಪವಿರುವ ಅರಣ್ಯ ಇಲಾಖೆ ನರ್ಸರಿಯಲ್ಲಿ ಪಶು ವೈದ್ಯರಿಂದ ಶವ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ :ಬಾಗೆ ಗ್ರಾಮ ಪಂಚಾಯ್ತಿ ಮುಂಭಾಗ ಜಿಂಕೆಗಳು ದಾಟಾಡುವ ಸ್ಥಳವಾಗಿದ್ದು ಇದೇ ಸ್ಥಳದಲ್ಲಿ ಅಪರಿಚಿತ ವಾಹನಗಳಿಗೆ ಸಿಕ್ಕಿ ಹಲವಾರು ಜಿಂಕೆಗಳು ಮೃತಪಟ್ಟಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಇದುವರೆಗೂ ಯಾವುದೇ ಸುರಕ್ಷತೆ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಜಿಂಕೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಅರಣ್ಯ ಇಲಾಖೆಯ ನಿರ್ಲಕ್ಷತನಕ್ಕೆ ಇನ್ನೆಷ್ಟು ಜಿಂಕೆಗಳು ಬಲಿಯಾಗಬೇಕೆಂದು ಪ್ರಶ್ನಿಸಿದ್ದಾರೆ. ಹಲವಾರು ವರ್ಷಗಳಿಂದ ಜಿಂಕೆಗಳು ಈ ರಸ್ತೆಯಲ್ಲಿ ದಾಟುತ್ತಿದ್ದರೂ ಕೂಡ ಅರಣ್ಯ ಇಲಾಖೆಗೆ ರಸ್ತೆಗೆ ಯಾವುದೇ ನಾಮಫಲಕ ಅಳವಡಿಸದೆ ಇರುವುದು ಜಿಂಕೆಗಳ ಸಾವಿಗೆ ಕಾರಣವಾಗುತ್ತಿದೆ ಎಂದು ಮಾಸುವಳ್ಳಿ ಚಂದ್ರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.