ಸಕಲೇಶಪುರ : ಆನೆಮಹಲ್ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ವದಂತಿ :ಆಹಾರ ಇಲಾಖೆಗಳ ಅಧಿಕಾರಿಗಳಿಂದ ಸ್ಪಷ್ಟನೆ
ಸಕಲೇಶಪುರ: ಪಟ್ಟಣದ ಸಮೀಪವಿರುವ ಆನೆಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರಬರಾಜು ಮಾಡುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿ ಪೂರೈಕೆಯಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಈ ರೀತಿಯ ಪಡಿತರ ಅಕ್ಕಿ ಪೂರೈಕೆಯಾಗುತ್ತಿದೆ ಎಂದು ಜನರು ಹೇಳಿದ್ದಾರೆ. ಪಡಿತರ ಅಕ್ಕಿಯಲ್ಲಿ ಈ ಅಕ್ಕಿಗಳು ಪೂರೈಕೆಯಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ಆರೋಪಿಸಿದ್ದಾರೆ.
ಪೂರೈಕೆಯಾಗಿರುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿಯನ್ನು ಜನರು ತಾವೇ ಬೇರ್ಪಡಿಸಿ ಪರೀಕ್ಷೆ ನಡೆಸಿ ಪ್ಲಾಸ್ಟಿಕ್ ಅಕ್ಕಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅನ್ನ ಸೇವನೆಯಿಂದ ಗ್ಯಾಸ್ ಟ್ರಬಲ್ ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತವೆ ಎಂಬ ವದಂತಿಗಳು ಹರಡಿವೆ. ಇನ್ನೂ ಕೆಲವರು ಪಡಿತರ ಅಕ್ಕಿಯನ್ನು ತೆಗೆದುಕೊಳ್ಳಲು ಮೀನಾಮೇಷ ಏಣಿಸುತ್ತಿದ್ದಾರೆ.
ಈ ಕುರಿತಂತೆ ಗ್ರಾಮಸ್ಥರು ಇಂದು ಬೆಳಗ್ಗೆ ಪಡಿತರ ವಿತರಣಾ ಕೇಂದ್ರದ ಮುಂದೆ ಜಮಾಯಿಸಿ ಅಧಿಕಾರಿಗಳು ಬಂದು ಸ್ಪಷ್ಟ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಆ ವೇಳೆಗೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳು ಆದರೆ ಈ ರೀತಿ ಪಡಿತರ ಅಕ್ಕಿಯಲ್ಲಿ ಮಿಶ್ರಣವಾಗಿರುವ ಅಕ್ಕಿ ಪ್ಲಾಸ್ಟಿಕ್ ಅಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಬಂದಿತ್ತು. ಅಲ್ಲದೆ ಸಾರ್ವಜನಿಕರಿಗೆ ಪೌಷ್ಟಿಕಾಂಶದ ಕೊರತೆ ಇರುವ ಕಾರಣ ಇಲಾಖೆ ಈ ರೀತಿಯ ಅಕ್ಕಿಯನ್ನು ಪೂರೈಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನೀರಿಕ್ಷಕ ಪ್ರಮೋದ್ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೆದಾರ್ ಶರವಣ ಸೇರಿದಂತೆ ಮುಂತಾದವರು ಇದ್ದರು