ಸಕಲೇಶಪುರ: ಬಿಜೆಪಿ ಸದಸ್ಯತ್ವ ಅಭಿಯಾನ ಚುರುಕು
ಸಕಲೇಶಪುರ : ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯ ಭರದಿಂದ ಸಾಗಿದ್ದು ಜಿಲ್ಲೆಯಲ್ಲೆ ಹೆಚ್ಚು ಸದಸ್ಯತ್ವ ಆಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ, ಶಾಸಕ ಸಿಮೆಂಟ್ ಮಂಜು ಹೇಳಿದರು.
ಬುಧವಾರ ತಾಲೂಕಿನ ಬಾಳ್ಳುಪೇಟೆ ಶಕ್ತಿ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಬೂತ್ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಬಿಜೆಪಿ ಜನಪರವಾಗಿದೆ. ಬಹುತೇಕರು ಇಷ್ಟಪಡುವ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಗ್ಯ ನೇತೃತ್ವದಲ್ಲಿ ದೇಶದ ಗೌರವ ಹೆಚ್ಚಾಗಿದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿ ಸದಸ್ಯತ್ವ ಗುರಿ ಹೊಂದಲಾಗಿದ್ದು ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಪಕ್ಷ ಇದಾಗಿದ್ದು ದೇಶಾದ್ಯಂತ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರಗಳ ಪ್ರಮುಖರು ಇನ್ನಷ್ಟು ಚುರುಕಾಗಬೇಕು ಬೂತ್ ಅಧ್ಯಕ್ಷರು ಹಾಗೂ ತಂಡದವರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು ತಮ್ಮ ತಂಡದೊಂದಿಗೆ ಗ್ರಾಮದ ಮನೆ – ಮನೆಗೆ ಭೇಟಿ ನೀಡಿ ಸದಸ್ಯರ ನೊಂದಣಿ ಮಾಡಬೇಕು. ಪಕ್ಷದ ಸದಸ್ಯತ್ವ ಪಡೆದವರಿಗೆ ಪಕ್ಷವೂ ಸೂಕ್ತ ಸ್ಥಾನಮಾನ ಮತ್ತು ಪ್ರಾಧಿನಿತ್ಯ ಕಲ್ಪಿಸುತ್ತದೆ ಹೆಚ್ಚು ಸದಸ್ಯರು ನೊಂದಾಯಿಸುವ ಕಾರ್ಯಕರ್ತರಿಗೆ ಪಕ್ಷವು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಕಾರ್ಯಕರ್ತರು ಹೆಚ್ಚು ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಬೇಕು ಎಂದು ಕರೆ ನೀಡಿದರು.ಇದೆ ವೇಳೆ ಸಾಂಕೇತಿಕವಾಗಿ ಮೊಬೈಲ್ ಆಪ್ ಮೂಲಕ ವೇದಿಕೆಯಲ್ಲಿದ್ದವರಿಗೆ ಸದಸ್ಯತ್ವ ಮಾಡಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್,ಮನ್ ಕೀ ಬಾತ್ ಜಿಲ್ಲಾ ಸಂಯೋಜಕ ಚೇತನ್,ತಾಲೂಕು ಉಪಾಧ್ಯಕ್ಷ ವೈ.ಡಿ ಬಸವರಾಜ್,ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್,ತಾಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ಬಾಗೆ ಗೋಪಿ, ಬಿಜೆಪಿ ಮುಖಂಡರಾದ ಬಾಳ್ಳು ಗೋಪಾಲ್, ಕ್ಯಾಮನಹಳ್ಳಿ ರಾಜ್ ಕುಮಾರ್, ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಿಡನೂರು, ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಎಸ್ ಶಿವಕುಮಾರ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.