ದತ್ತಮಾಲಾ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬಿಗಿ ಪೋಲಿಸ್ ಭದ್ರತೆ: ಎ.ಎಸ್.ಪಿ ಮಿಥುನ್
ಸಕಲೇಶಪುರ: ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಯಾವುದೆ ರೀತಿಯ ಅಹಿತಕರ ಘಟನೆ ತಾಲೂಕಿನಲ್ಲಿ ಸಂಭವಿಸದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ಎ.ಎಸ್.ಪಿ ಮಿಥುನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುರುವಾರ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಅಂಗವಾಗಿ ತಾಲೂಕಿನಿಂದ ಸುಮಾರು 3000ಕ್ಕೂ ಹೆಚ್ಚು ಮಂದಿ ಬಜರಂಗದಳ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ತೆರಳಲಿದ್ದು ಈ ನಿಟ್ಟಿನಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಗುರುವಾರ ಮುಂಜಾನೆ 6 ಗಂಟೆಯಿಂದ ಮದ್ಯರಾತ್ರಿ 12 ಗಂಟೆವರೆಗೆ ಮಧ್ಯ ಮಾರಾಟ ನಿಷೇದಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ತಾಲೂಕು ಹಾಗೂ ಹೊರ ಜಿಲ್ಲೆಗಳಿಂದ ಮಾಲಾದಾರಿಗಳು ಆಗಮಿಸುವುದರಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಚೆಕ್ ಪೋಸ್‌ಟ್ ಗಳನ್ನು ತೆರೆಯಲಾಗಿದೆ. ಯಸಳೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2, ಹಾನುಬಾಳ್ 1, ಮಾರನಹಳ್ಳಿ 1, ಸಕಲೇಶಪುರ ಪಟ್ಟಣದ ತೇಜಸ್ವಿ ವೃತ್ತದ ಸಮೀಪ 1 ಚೆಕ್ ಪೋಸ್ಟ್ ತೆರೆಯಲಾಗಿದ್ದು ಪ್ರತಿ ವಾಹನಗಳ ವಿವರವನ್ನು ದಾಖಲಿಸಿಕೊಳ್ಳಲಾಗುತ್ತದೆ ಹಾಗೂ ಈಗಾಗಲೆ ಬಜರಂಗದಳ ವಿಎಚ್‌ಪಿ ಮುಖಂಡರುಗಳೊಂದಿಗೆ ಶಾಂತಿ ಸಭೆ ನಡೆಸಲಾಗಿದ್ದು, ಹೆಚ್ಚಿನ ಭದ್ರತೆಗಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಪೋಲಿಸರನ್ನು ನಿಯೋಜಿಸಲಾಗಿದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಯಾವುದ ರೀತಿಯಲ್ಲಿ ಶಾಂತಿ ಭಂಗವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು.