ಸಕಲೇಶಪುರ : ಅವೈಜ್ಞಾನಿಕ ಕಾಮಗಾರಿ ವಿರುದ್ಧ ಮಧ್ಯರಾತ್ರಿ ಸಿಡಿದೆದ್ದ ಗುಲಗಳಲೆ ಗ್ರಾಮಸ್ಥರು.
ಮಧ್ಯರಾತ್ರಿ ಕಾಮಗಾರಿಗೆ ತಡೆಹೊಡ್ಡಿ ಗುತ್ತಿಗೆದಾರರನ್ನು ವಾಪಸ್ ಕಳಿಸಿದ ಸ್ಥಳೀಯರು
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕುಂಟುತ್ತ ಸಾಗಿರುವ ಕಾಮಗಾರಿ ವಿರುದ್ಧ ಆಕ್ರೋಶ.
ಸಕಲೇಶಪುರ : ಆಮೆ ಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಮಧ್ಯರಾತ್ರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹಾಸನದಿಂದ ಮಾರನಹಳ್ಳಿವರೆಗೆ ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ತಾಲೂಕಿನ ಗುಲಗಳಲೆ ಗ್ರಾಮದ ಸಮೀಪ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಾಮಗಾರಿ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಮಧ್ಯರಾತ್ರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಕಾಂಕ್ರೀಟ್ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸುತ್ತಿದ್ದು ಭೂಮಿಯ ಕೆಳಭಾಗ ಕೆಸರಿನಿಂದ ಕೂಡಿದ್ದು ಅದರ ಮೇಲೆಯೇ ಕಾಂಕ್ರೀಟ್ ಹಾಕುತ್ತಿರುವುದರಿಂದ ಹೆಚ್ಚು ದಿನ ಈ ರಸ್ತೆ ಬಾಳಿಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಗೆ ತಡೆಹೊಡ್ದಿದ ಘಟನೆ ನಡೆದಿದೆ.
ಈಗಾಗಲೇ ಬಹಳಷ್ಟು ಕಡೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿದ್ದು ಆದರೂ ಸಹ ಎಚ್ಚೆತ್ತುಕೊಳ್ಳದ ಗುತ್ತಿಗೆದಾರರ ಕಂಪನಿಯ ಇಂಜಿನಿಯರ್ ಗಳು ಪುನಹ ಕಳಪೆ ಕಾಮಗಾರಿ ಮುಂದುವರಿಸಿದ್ದಾರೆ ಇಂಥ ಅವೈಜ್ಞಾನಿಕ ಕಾಮಗಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರ ಆಕ್ರೋಶಕ್ಕೆ ಬೆದರಿದ ಗುತ್ತಿಗೆದಾರರು ರಾತ್ರೋರಾತ್ರಿ ಕಾಮಗಾರಿ ನಿಲ್ಲಿಸಿ ವಾಪಸ್ ಆಗಿದ್ದಾರೆ.
ಕಳೆದ ಆರು ವರ್ಷಗಳಿಂದ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು ಈ ರಸ್ತೆಯಲ್ಲಿ ಓಡಾಡುವುದೇ ದುಷ್ಕರವಾಗಿದೆ. ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಿಸಿಕೊಳ್ಳದಿದ್ದರೆ ಹೆದ್ದಾರಿಯಲ್ಲಿ ಸಂಚರಿಸುವುದೇ ಕಷ್ಟವಾಗಲಿದೆ ಎಂದು ಅರಿತ ಗ್ರಾಮಸ್ಥರು ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ್ದಾರೆ.