ಶೌರ್ಯ ಸ್ವಯಂಸೇವಕರ ತುರ್ತು ಸಂದರ್ಭಗಳ ಸೇವೆ ಪ್ರಶಂಸನೀಯ.:- ಉಪ ವಿಭಾಗಾಧಿಕಾರಿ ಡಾ. ಮಂಜುನಾಥ್.ವಿ
ಸಕಲೇಶಪುರ: ಪ್ರಕೃತಿ ವಿಕೋಪಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಸ್ಥಳೀಯವಾಗಿ ಸಹಾಯ ಮಾಡಲು ತರಬೇತಿ ಪಡೆದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರ ತುರ್ತು ಸಂದರ್ಭಗಳ ಸೇವೆ ಪ್ರಶಂಸನೀಯ ಎಂದು ತಾಲ್ಲೂಕು ಉಪ ವಿಭಾಗಾಧಿಕಾರಿ ಡಾ. ಮಂಜುನಾಥ್.ವಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನವತಿಯಿಂದ ಸಕಲೇಶಪುರ ತಾಲ್ಲೂಕಿನ ಸವಿತ ಸಮಾಜ ಕಲ್ಯಾಣ ಮಂಟಪದಲ್ಲಿ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ತಾಲ್ಲೂಕು ಉಪ ವಿಭಾಗಾಧಿಕಾರಿ ಡಾ. ಮಂಜುನಾಥ್ ವಿ. ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಶೌರ್ಯ’ ಸ್ವಯಂಸೇವಕರು ತುರ್ತು ಸಂದರ್ಭಗಳಲ್ಲಿ ವಿಪತ್ತು ಸೇವೆ, ಸಾಮಾಜಿಕ ಸೇವೆಯನ್ನು ನಿಸ್ವಾರ್ಥ ಮನಸ್ಸಿನಿಂದ ಮಾಡುತ್ತಿದ್ದಾರೆ . ಇದು ಒಂದು ಸಮಾಜಕ್ಕೆ ಮಾದರಿಯಾಗಿರುವ ಸೇವೆಯಾಗಿದೆ.
ಶೌರ್ಯ ಸ್ವಯಂಸೇವಕರು ಈ ಸಂಘಟನೆ ಮೂಲಕ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳಿ. ವೈಯಕ್ತಿಕ ಶಿಸ್ತು, ಸಾಮಾಜಿಕ ಸೇವೆಯಲ್ಲಿ ಇರಬೇಕಾದ ಬದ್ಧತೆ, ದೇಶ ಪ್ರೇಮ, ಮಾನವೀಯತೆ, ಆರೋಗ್ಯ ಕಾಳಜಿ ರೂಡಿಸಿಕೊಳ್ಳಿ ಎಂದರು .
ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್ ಮಾತನಾಡಿ “ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಆಪತ್ ಬಾಂಧವರಾಗಿ, ಸ್ಥಳೀಯ ಯೋಧರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಮಾನವೀಯ ಗುಣ, ಹೃದಯವಂತಿಕೆಯನ್ನು ಸ್ವಯಂಸೇವಕರು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹಾಸನ ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯಿಲಿ ಇವರು ಮಾತನಾಡಿ ‘ಶೌರ್ಯ’ ಸ್ವಯಂಸೇವಕರು ಮೌಲ್ಯಯುತ ಕೆಲಸಗಳನ್ನು ಮಾಡಬೇಕು. ತಿಳುವಳಿಕೆ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು, ಕಾರ್ಯಕ್ರಮದ ಉದ್ದೇಶವನ್ನು ಅರ್ಥೈಸಿಕೊಂಡು ಯಶಸ್ವಿಯಾಗಿ ಶೌರ್ಯ ಘಟಕಗಳನ್ನು ಮುನ್ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಇವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಘಟಕಗಳಲ್ಲಿ ನೂತನವಾಗಿ ಇಬ್ಬರನ್ನು ತಾಲೂಕುಗಳ ಮಾಸ್ಟರ್ ಮತ್ತು ಕ್ಯಾಪ್ಟನ್ ಗಳನ್ನಾಗಿ ಆಯ್ಕೆ ಮಾಡಲಾಯಿತು.ಶೌರ್ಯ ಕಾರ್ಯಕ್ರಮ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪೂಜ್ಯರು ನೀಡಿದ ಶೌರ್ಯ ಬ್ಯಾಗ್ ಗಳನ್ನು ಎಲ್ಲಾ ಸ್ವಯಂಸೇವಕರಿಗೆ ವಿತರಿಸಲಾಯಿತು.ಹಾಗೂ ವಿಪತ್ತು ನಿರ್ವಹಣಾ ಮಾರ್ಗದರ್ಶಿ ಪುಸ್ತಕವನ್ನು ಸಂದರ್ಭದಲ್ಲಿ ಘಟಕದ ಸಂಯೋಜಕರಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ pಅಧ್ಯಕ್ಷರಾದ ಜೈ ಭೀಮ್ ಮಂಜುನಾಥ್, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಗಿರೀಶ್ ಮಂಜುನಾಥ್, ಈರಪ್ಪ ನಳ್ಳುಳ್ಳಿ, ‘ಶೌರ್ಯ’ ವಿಭಾಗದ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್, ಕಿಶೋರ್, ಬೇಲೂರು ತಾಲೂಕಿನ ಯೋಜನಾಧಿಕಾರಿ ಮಂಜುಳಾ, ಸಕಲೇಶಪುರ ಯೋಜನಾಧಿಕಾರಿ ರಾಜೇಶ್, ಮೈಸೂರು ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮುಖೇಶ್, ಜನಜಾಗೃತಿ ಪ್ರಾದೇಶಿಕ ಮೇಲ್ವಿಚಾರಕ ವಸಂತ್ ಉಪಸ್ಥಿತರಿದ್ದರು.



