ಪರೀಕ್ಷೆ ಹೆಸರಿನಲ್ಲಿ ಸಮುದಾಯಕ್ಕೆ ಅವಮಾನ ಮಾಡಿದವರ ವಿರುದ್ದ ಕ್ರಮಕ್ಕೆ ತಾಲೂಕು ಬ್ರಾಹ್ಮಣ ಸಂಘ ಆಗ್ರಹ
ಸಕಲೇಶಪುರ: ತೀರ್ಥಹಳ್ಳಿಯ ಸಿ ಇ ಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವುದು ಹಾಗೂ ಬೀದರ್ ನಲ್ಲೂ ಸಹ ಇದೇ ರೀತಿ ಘಟನೆ ನಡೆದಿರುವುದು ಅತ್ಯಂತ ಹೀನಾಯವಾಗಿದ್ದು ಇದು ನಮ್ಮ ಸಮಾಜದ ವಿರುದ್ಧ ಎಸಗಿರುವ ತೀವ್ರ ಸ್ವರೂಪದ ಅವಮಾನವಾಗಿದೆ ಕೂಡಲೆ ತಪ್ಪಿಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಬ್ರಾಹ್ಮಣ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.
ಕೇವಲ ಬ್ರಾಹ್ಮಣರನ್ನು ಗುರಿಯಾಗಿಸಿ ಅಪಮಾನಿಸುವ ಷಡ್ಯಂತ್ರದ ಒಂದು ಭಾಗವಾಗಿರುವ ಇದು, ಶಾಂತಿಪ್ರಿಯರಾಗಿ ಸದಾ ಸಮಾಜದ ಹಿತ ಬಯಸುವ ಬ್ರಾಹ್ಮಣ ಸಮಾಜವನ್ನು ದುರ್ಬಲರೆಂದು ಭಾವಿಸಿ ದೌರ್ಜನ್ಯವೆಸಗುವ ಕೀಳು ಮನಃಸ್ಥಿತಿಯ ರಾಜಕೀಯ ವ್ಯಕ್ತಿಗಳ ತಾಳಕ್ಕೆ ಕುಣಿಯುವ ಅಧಿಕಾರಶಾಹಿಯ ದುರ್ವರ್ತನೆ ಹಿಡಿದ ಕನ್ನಡಿಯಾಗಿದೆ. ಇಂತಹ ಘಟನೆ ಈಗೀಗ ಹೆಚ್ಚಾಗಿ ಕಂಡು ಬರುತ್ತಿರುವುದು ತೀವ್ರ ವಿಷಾದನೀಯ. ಸಂವಿಧಾನವು ನಮ್ಮಗಳ ಧರ್ಮವನ್ನು ಪಾಲಿಸುವ ಮೂಲಭೂತ ಹಕ್ಕು ನಮ್ಮದಾಗಿದ್ದು ಇದನ್ನು ಮೋಟಕುಗೊಳಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಜನಿವಾರ ಕತ್ತರಿಸುವ ಅಧಿಕಾರ ಇವರಿಗೆ ಎಲ್ಲಿಂದ ಬಂತು? ಯಾವ ಕಾನೂನಿನನ್ವಯ ಇದು ಸಮರ್ಥನೀಯ. ನಮ್ಮ ಸಮಾಜದವರ ವಿರುದ್ಧ ಒಂದಲ್ಲ ಒಂದು ರೀತಿಯ ಕಿರುಕುಳ ನೀಡುತ್ತಿರುವುದು ತೀವ್ರ ಖಂಡನಾರ್ಹ. ಈ ಘಟನೆಗೆ ಸಂಬಂಧಿಸಿದವರನ್ನು ಕೂಡಲೇ ಬಂಧಿಸಿ ಮುಂದಿನ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.