. ಶಿವಕುಮಾರ ಸ್ವಾಮೀಜಿ ಮನುಕುಲಕ್ಕೆ ಮಾದರಿ- ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಮಂಗಳವಾರ ತಾಲೂಕಿನ ಬಾಗೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಯುವ ಸೇನೆ ವತಿಯಿಂದ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿಯು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀಗಳು ಜಾತಿ, ಧರ್ಮ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಅನ್ನ, ವಸತಿ, ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರು’ ಎಂದು ಸ್ಮರಿಸಿದರು.12ನೇ ಶತಮಾನದಲ್ಲಿ ಬಸವಣ್ಣರು ಸಾಮಾಜಿಕ ಕ್ರಾಂತಿ ಮಾಡಿದ ರೀತಿಯಲ್ಲಿ ಅಕ್ಷರ ಕ್ರಾಂತಿಗಾಗಿ ಬದುಕನ್ನೇ ಮುಡುಪಾಗಿಟ್ಟ ಶಿವಕುಮಾರ ಸ್ವಾಮೀಜಿಗಳು ಎಂದೆಂದಿಗೂ ಅಮರ. ಸಿದ್ಧಗಂಗಾ ಮಠದಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ’ ಎಂದು ತಿಳಿಸಿದರು.
ಅಪರೂಪದ ತಪಸ್ವಿ: ‘ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ತೆಂಕಲಗೂಡು ಬೃಹನ್ ಮಠದ ಶ್ರೀ ಗಳಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಈ ಸಂಧರ್ಭದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಧರ್ಮರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ವೀರಶೈವ ಲಿಂಗಾಯತ ಯುವ ಸೇನೆಯ ಬೆಳಗೋಡು ಹೋಬಳಿ ಅಧ್ಯಕ್ಷ ನಾಗೇಂದ್ರ, ತಾಲೂಕು ಅಧ್ಯಕ್ಷ ಸಾಗರ್ ಜಾನೇಕೆರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗೋಪಿನಾಥ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ನೇತ್ರಾವತಿ ಮಂಜುನಾಥ್ , ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್, ಸೇರಿದಂತೆ ಸಂಘಟನೆಯ ತಾಲೂಕು, ಹೋಬಳಿ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು