ಯಾವುದೆ ಗೊಂದಲವಿಲ್ಲದೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ
ಸಕಲೇಶಪುರ: ತಾಲೂಕಿನ ಒಂಬತ್ತು ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಯಾವುದೇ ಅಡಚಣೆಯಿಲ್ಲದೆ ಶುಕ್ರವಾರ ಪ್ರಾರಂಭಗೊಂಡು ಸುಸೂತ್ರವಾಗಿ ನಡೆಯಿತು.
ಸಕಲೇಶಪುರ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯ 9 ಕೇಂದ್ರದಲ್ಲಿ 1,280 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 632 ಹುಡುಗರು ಮತ್ತು 648 ಹುಡುಗಿಯರು ಇಂದು ಪರೀಕ್ಷೆ ಎದುರಿಸಿದರು. ಪರೀಕ್ಷೆ ಬರೆಯುವ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮುಂಬಾಗ ಯಾವ ಕ್ರಮ ಸಂಖ್ಯೆಗಳಿಗೆ ಯಾವ ಕೊಠಡಿ ಎಂಬುದನ್ನು ನೋಡಿಕೊಳ್ಳುವುದು ಕಂಡು ಬಂದಿತು. ವಿದ್ಯಾರ್ಥಿಗಳ ಜೊತೆಗೆ ಪೋಷಕರ ಪರೀಕ್ಷಾ ಕೇಂದ್ರದ ಮುಂಭಾಗ ನಿಂತಿರುವುದು ಕಂಡು ಬಂದಿತು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು . 175 ಪರೀಕ್ಷಾ ಸಿಬ್ಬಂದಿಗಳನ್ನು ನಿಯೋಜಿಸಿ, ಪರೀಕ್ಷೆ ಸರಾಗವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗಿತ್ತು. ಪರೀಕ್ಷೆ ಪ್ರಾರಂಭ ಕ್ಕೂ ಮುನ್ನ ಎಲ್ಲ ಕೇಂದ್ರಗಳಲ್ಲಿ ಅಧೀಕ್ಷಕರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು. ಪರೀಕ್ಷೆಯು ಅವರ ಭವಿಷ್ಯದ ಒಂದು ಹಂತ ಮಾತ್ರ ಎಂಬ ನಿಟ್ಟಿನಲ್ಲಿ ನಿರಾಳ ಮನೋಭಾವದಿಂದ ಬರೆಯುವಂತೆ ಉತ್ತೇಜಿಸಲಾಯಿತು.ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಮತ್ತು ಇತರ ಅನಾಧಿಕೃತ ವಸ್ತುಗಳನ್ನು ನಿಷೇಧಿಸಲಾಗಿತ್ತು. ಪ್ರತಿಯೊಂದು ಹಾಲ್‌ನಲ್ಲಿ ನಿಗಾ ಇರಿಸಲು ಪ್ರತ್ಯೇಕ ಉಸ್ತುವಾರಿಗಳನ್ನು ನೇಮಿಸಿ, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿತ್ತು. ಮೇಲ್ವಿಚಾರಣೆಗೆ ಅಧಿಕಾರಿಗಳು ನೇರ ವೀಕ್ಷಣೆ ನಡೆಸಲು ವ್ಯವಸ್ಥೆಯು ಮಾಡಲಾಗಿತ್ತು.
ಶುಕ್ರವಾರ ಸಂತೆ ಕೇಂದ್ರದಲ್ಲಿ ಮರು ಪರೀಕ್ಷೆ ಬರೆಯುತ್ತಿರುವ ಏಕೈಕ ಪರೀಕ್ಷಾ ಕೇಂದ್ರವಾಗಿದೆ, ಉಳಿದ 8 ಪರೀಕ್ಷಾ ಕೇಂದ್ರದಲ್ಲಿ ಮೊದಲ ಬಾರಿ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಳಾಗಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಯಾವುದೇ ಅಕ್ರಮ ನಡೆಯದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.