ಅಚ್ಚನಹಳ್ಳಿ : ಬಸ್ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿದ – ಶಾಸಕ ಸಿಮೆಂಟ್ ಮಂಜು
ಸಕಲೇಶಪುರ :ತಾಲೂಕು ಕೇಂದ್ರಕ್ಕೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಬಸ್ ಸೌಲಭ್ಯವನ್ನು ಪುನರಾರಂಭಿಸಲಾಗಿದ್ದು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಸಾಕಾರಗೊಂಡಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಬುಧುವಾರ ತಾಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಚ್ಚನಹಳ್ಳಿಯಲ್ಲಿ ನೂತನ ಬಸ್ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು,
ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯನ್ನು ಗಮನಿಸಿ ಕಳೆದ ಹಲವಾರು ವರ್ಷಗಳಿಂದ ಬಂದ್ ಆಗಿದ್ದ ಸಾರಿಗೆ ಬಸ್ ಸಂಚಾರವನ್ನು ಪುನರಾರಂಭಿಸಲಾಗಿದೆ.ಕಡು ಬಡವರು ಹಾಗೂ ಮಧ್ಯಮಾ ವರ್ಗ ಸರ್ಕಾರಿ ಸಾರಿಗೆ ಬಸ್ ಸೌಲಭ್ಯದ ಮೇಲೆ ಅವಲಂಭಿತರಾಗಿದ್ದಾರೆ.ಇಡೀ ಜಿಲ್ಲೆಯಲ್ಲಿ ಸಕಲೇಶಪುರ ಘಟಕ ಎರಡನೇ ಸ್ಥಾನದಲ್ಲಿರುವುದು ಸಂತೋಷದ ವಿಷಯವಾಗಿದೆ.ಅಚ್ಚನಹಳ್ಳಿಯಿಂದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ವಿದ್ಯಾಭ್ಯಾಸಕ್ಕಾಗಿ ನಿತ್ಯ ವಿವಿಧೆಡೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‍ಗಳ ಕೊರತೆಯಿಂದ ಅನುಭವಿಸುತ್ತಿರುವ ಕುರಿತಂತೆ ಈ ಭಾಗದ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದರು ಈ ಕುರಿತಂತೆ ಕೆ.ಎಸ್. ಆರ್. ಟಿ. ಸಿ ವ್ಯವಸ್ಥಾಪಕರಿಗೆ ಸರ್ವೇ ನಡೆಸುವಂತೆ ಸೂಚಿಸಿದ್ದೆ ಎಂದರು.
ಶಾಲಾ– ಕಾಲೇಜುಗಳಿಗೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳು ತಲುಪುವಂತೆ ಬಸ್ ಸೌಲಭ್ಯ ಒದಗಿಸಲು ಶೀಘ್ರ ಕ್ರಮವಹಿಸಿ ಎಂದು ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದರು.
ಗ್ರಾಮಸ್ಥರು ಬಸ್‌ಗೆ ಹೂವಿನ ಅಲಂಕಾರ ಮಾಡಿದ್ದರು. ಇದೆ ವೇಳೆ ಶಾಸಕರು ಬಸ್ ಚಾಲಕ ಮತ್ತು ಕಂಡಕ್ಟರ್‌ಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಅಭಿವೃದ್ಧಿ ಅಧ್ಯಕ್ಷರಾದ ಎಚ್. ಎಚ್ ಪೂರ್ಣೇಶ್, ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೆ ಭರತ್,ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮೋಹನ್, ಕಮಲಮ್ಮ ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್, ಪ್ರದಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಬೂತ್ ಅಧ್ಯಕ್ಷ ಮಂಜುನಾಥ್,ಬಿಜೆಪಿ ಮುಖಂಡರಾದ ಪ್ರಕಾಶ್,ಕ್ಯಾಮನಹಳ್ಳಿ ರಾಜಕುಮಾರ್, ಪ್ರಸನ್ನ, ವಿನಯ್, ಅನಿಲ್ ಕುಮಾರ್ ಗ್ರಾಮಸ್ಥರು ಉಪಸ್ಥಿತರಿದ್ದರು.