ಸಕಲೇಶಪುರ ಪೋಲಿಸರ ಭರ್ಜರಿ ಬೇಟೆ: ಅಂತರರಾಜ್ಯ , ಕಾರು ಕಳ್ಳನ ಬಂಧನ, 4 ಕಾರು ಮತ್ತು 2,75,000/- ನಗದು ವಶ:
ಸಕಲೇಶಪುರ: ಕಾರುಗಳನ್ನು ಕದ್ದುಕೊಂಡು ಹೋಗಿ ಅದರ ಬಿಡಿಭಾಗಗಳನ್ನು ಬಿಚ್ಚಿ ಗುಜುರಿಯವರಿಗೆ ಮಾರುತ್ತಿದ್ದ ಅಂತರರಾಜ್ಯ ಕಳ್ಳನೋರ್ವನನ್ನು ಸಕಲೇಶಪುರ ಪೋಲಿಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ತಾಲ್ಲೂಕು ಹಾಗು ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾರುಗಳ ಕಳ್ಳತನ ಪ್ರಕರಣಗಳು ವರದಿಯಾದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಸಹಾಯಕ ಪೋಲಿಸ್ ಅಧೀಕ್ಷಕ ಮಿಥುನ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಪ್ರಕರಣದ ತನಿಖೆ ನಡೆಸಿದಾಗ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪುದಿಯ ತೆರವು ತಾಲೂಕಿನ ಉಡತುರಿ ಹೌಸ್ ನಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಕೆ.ಎಸ್ ದಿಲೀಶ್ ಬಿನ್ ಶಂಕರನ್ 39 ವರ್ಷ ಎಂಬ ವ್ಯಕ್ತಿಯನ್ನು ಬಂಧಿಸಿ ಆರೋಪಿಯಿಂದ 4 ಕಾರುಗಳು ಹಾಗೂ ಕದ್ದ ಕಾರುಗಳ ಮಾರಾಟ ಮಾಡಿ ಕೂಡಿಟ್ಟಿದ್ದಂತಹ ರೂ 2,75,000/- ನಗದು ಹಣ ಹಾಗು ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ಸೆನ್ಸಾರ್ ಮೆಷಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಕಾರನ್ನು ಕಳ್ಳತನ ಮಾಡಿಕೊಂಡು ಮಂಗಳೂರಿಗೆ ತೆಗೆದುಕೊಂಡು ಹೋಗಿ ಬಿಡಿಭಾಗಗಳನ್ನು ಬಿಚ್ಚಿ ಗುಜರಿಗೆ ಮಾರಾಟ ಮಾಡಲು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಆರೋಪಿ ಪತ್ತೆಕಾರ್ಯದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಮಿಥುನ್,ವೃತ್ತ ನಿರೀಕ್ಷಕ ಚೈತನ್ಯ. ಆಲೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಗಂಗಾಧರ್, ಗ್ರಾಮಾಂತರ ಪಿ.ಎಸ್.ಐಗಳಾದ ಸದಾಶಿವ ತಿಪ್ಪಾರೆಡ್ಡಿ, ಖತೀಜಾ ಹಾಗೂ ಸಿಬ್ಬಂದಿಗಳಾದ ಸುನೀಲ್, ಶಫೀ, ಖಾದರ್ ಅಲಿ, ಸತೀಶ್, ಆಲೂರು ಠಾಣಾ ಸಿಬ್ಬಂದಿಗಳಾದ ರಾಕೇಶ್, ಸೋಮಶೇಖರ್ ಮತ್ತು ಹೈವೇ ಗಸ್ತು ವಾಹನ ಚಾಲಕ ಪ್ರದೀಪ್ ಮತ್ತು ಎ.ಎಸ್.ಐ ವಜೀರ್ ಭಾಗಿಯಾಗಿದ್ದರು.