ಹಿಂದೂ ಕಾರ್ಯಕರ್ತರ ಪರ ಗುಡುಗಿದ ಶಾಸಕ ಸಿಮೆಂಟ್ ಮಂಜು
ಅಮಾಯಕರಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ತಾಕಿತ್ತು.
ಸಕಲೇಶಪುರ: ದ್ವೇಷ ಭಾಷಣ ಪ್ರಕರಣದ ಹೆಸರಿನಲ್ಲಿ ವಿನಾಕಾರಣ ಅಮಾಯಕ ಕಾರ್ಯಕರ್ತರನ್ನು ಬಂಧನ ಮಾಡಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಪೋಲಿಸ್ ಇಲಾಖೆಗೆ ಶಾಸಕ ಸಿಮೆಂಟ್ ಮಂಜು ಎಚ್ಚರಿಕೆ ನೀಡಿದ್ದಾರೆ.
ದ್ವೇಷ ಭಾಷಣ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರಿಗೆ ಪೋಲಿಸರು ಹಿಂಸೆ ನೀಡುತ್ತಿರುವ ಕುರಿತು ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತಮ್ಮಯ್ಯರವರೊಂದಿಗೆ ಮಾತನಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ ಕ್ಯಾಮನಹಳ್ಳಿ ಗ್ರಾಮದಲ್ಲಿ ಕೆಲದಿನಗಳ ಹಿಂದೆ ಗರ್ಭಿಣಿ ಗೋವೊಂದನ್ನುಕೆಲವು ಕಿಡಿಗೇಡಿಗಳು ಗುಂಡು ಹೊಡೆದು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಹಿಂದೂ ಮುಖಂಡರೊರ್ವರು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರೆಂದು ಆರೋಪಿಸಿ ಅವರ ವಿರುದ್ದ ಪೋಲಿಸರು ದೂರು ದಾಖಲಿಸಿಕೊಂಡಿದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಇದಾದ ನಂತರದ ಬೆಳವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಮುಖಂಡರ ಜೊತೆ ನಿಮಗೆ ಸಂಪರ್ಕವಿದೆಯೆಂದು ಆರೋಪಿಸಿ ಕೆಲವು ಅಮಾಯಕ ಕಾರ್ಯಕರ್ತರುಗಳನ್ನು ವಿಚಾರಣೆ ಹೆಸರಿನಲ್ಲಿ 24 ಗಂಟೆಗೂ ಹೆಚ್ಚು ಕಾಲ ಪೋಲಿಸ್ ಠಾಣೆಯಲ್ಲಿ ಇಟ್ಟುಕೊಳ್ಳುವುದು ಎಷ್ಟು ಸರಿ?ಈ ಸಂಧರ್ಭದಲ್ಲಿ ಕೆಲವು ಕಾರ್ಯಕರ್ತರ ಮೇಲೆ ಪೋಲಿಸರು ಹಲ್ಲೆ ನಡೆಸಿರುವ ಆರೋಪ ಸಹ ಇದೆ, ನಾವು ಶಾಂತಿ ಪ್ರಿಯರಾಗಿದ್ದು ನಮ್ಮ ಕಾರ್ಯಕರ್ತರು ಸಹ ಶಾಂತಿಪ್ರಿಯರಾಗಿದ್ದಾರೆ, ವಿನಾಕಾರಣ ನಮ್ಮ ಸಂಘಟನೆಯ ಅಮಾಯಕ ಕಾರ್ಯಕರ್ತರನ್ನು ಪೋಲಿಸರು ವಿಚಾರಣೆ ಹೆಸರಿನಲ್ಲಿ ಬಂಧನ ಮಾಡಲು ಮುಂದಾದರೆ ಸರಿಯಿರುವುದಿಲ್ಲ.. ಕ್ಯಾಮನಹಳ್ಳಿಯಲ್ಲಿ ನಡೆದ ಘಟನೆ ನನ್ನ ಕಣ್ಣಲ್ಲಿ ನೀರು ತರಿಸಿದೆ. ಪೋಲಿಸರು ರಾಜಕೀಯ ಒತ್ತಡಕ್ಕೊಳಗಾಗಿ ನನಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಕಾರ್ಯಕರ್ತರು ಯಾರು ಹೆದರುವುದು ಬೇಡ, ಕಾರ್ಯಕರ್ತರ ಜೊತೆ ಸದಾ ನಾನಿರುತ್ತೇನೆ. ಕ್ಷೇತ್ರವನ್ನು ಸದಾ ಶಾಂತಿಯುತವಾಗಿಡಲು ಮುಂದಿರುತ್ತೇನೆ ಎಂದಿದ್ದಾರೆ.