ಸಕಲೇಶಪುರ : ತಡಕಲು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರಕ್ಕೆ ಕರೆ.
ಮೂಲಸೌಕರ್ಯ ಕೊರತೆ ಹಿನ್ನಲೆ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ.
ಸಕಲೇಶಪುರ : ತಾಲೂಕಿನ ಯಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಕಲು ಗ್ರಾಮಕ್ಕೆ ರಸ್ತೆ ಹಾಗೂ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಕಳೆದ 9 ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಕುಂಟು ನೆಪ ಹೇಳುತ್ತಿರುವ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಪ್ರವೇಶಿಸುತ್ತಾರೆ ಆದ್ದರಿಂದ ಗ್ರಾಮಕ್ಕೆ ಪ್ರವೇಶಿಸುವ ಮುನ್ನವೇ ಚುನಾವಣೆ ಬಹಿಷ್ಕರಿಸುವ ಬ್ಯಾನರ್ ಅಳವಡಿಸಿ ಯಾವುದೇ ಪಕ್ಷದವರು ಚುನಾವಣಾ ಪ್ರಚಾರಕ್ಕಾಗಿ ಗ್ರಾಮದೊಳಗೆ ಆಗಮಿಸದಂತೆ ತಡೆಹೊಡ್ಡಿದ್ದಾರೆ. ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಮಳೆಗಾಲದಲ್ಲಿ ಗ್ರಾಮಸ್ಥರು ಗ್ರಾಮದೊಳಗೆ ತೆರಳಲು ಹರ ಸಾಹಸ ಪಡಬೇಕಿದೆ, ರಸ್ತೆ ಜೊತೆಗೆ ಇನ್ನಿತರ ಮೂಲಭೂತ ಸೌಕರ್ಯವಿಲ್ಲದೆ ಗ್ರಾಮಸ್ಥರು ಪರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಶಾಸಕ ಎಚ್. ಕೆ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು ರಸ್ತೆ ನಿರ್ಮಾಣದ ಕುರಿತು ಪೂರಕವಾಗಿ ಸ್ಪಂದಿಸಿಲ್ಲ. ತಾಲೂಕು ಪಂಚಾಯಿತಿ ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕಾಗಿ 2 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕಳಲೆ ಗುರುರಾಜ್ ಎಂಬುವರು ಶಾಸಕರ ಮೇಲೆ ಒತ್ತಡ ತಂದು ಇಲ್ಲಿನ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮತದಾರರು ಇದ್ದಾರೆ ಎಂಬ ಕಾರಣಕ್ಕೆ ಶಾಸಕರು ರಸ್ತೆ ನಿರ್ಮಾಣದ ಬಗ್ಗೆ ಹೆಚ್ಚಿನ ಒತ್ತು ನೀಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.