ಸಕಲೇಶಪುರ ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ.
ಕಾರ್ಯಕ್ರಮ ಉದ್ಘಾಟಿಸಿದ ಮಾ.ಜಿಪಂ ಸದಸ್ಯೆ ಚಂಚಲ ಕುಮಾರಸ್ವಾಮಿ.
ಸಕಲೇಶಪುರ : ಮಲೆನಾಡು ವೀರಶೈವ ಸಮಾಜದ ಅಂಗ ಸಂಸ್ಥೆಯಾದ ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶುಕ್ರವಾರ ಆಚರಣೆ ಮಾಡಲಾಯಿತು.
ಪಟ್ಟಣದ ಗುರುವೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ತಹಸೀಲ್ದಾರ್ ಮೇಘನಾ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಚಂಚಲ ಕುಮಾರಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ತಹಸೀಲ್ದಾರ್ ಮೇಘನಾ,ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ. ಮಹಿಳೆಯರಿಗೆ ಮೊದಲು ಶಿಕ್ಷಣ ಮತ್ತು ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಎಂದು ಕಿವಿ ಮಾತು ಹೇಳಿದರು.
ಚಿಕ್ಕಮಗಳೂರಿನ ಖ್ಯಾತ ವಕೀಲರಾದ ಮಮತರವರು ಮಾತಾನಾಡಿ ಪ್ರಪಂಚದ ಇತರೆ ದೇಶಗಳಿಗಿಂತ ಭಾರತ ಮಹಿಳೆಯರಿಗೆ ಹೆಚ್ಚು ಹಕ್ಕುಗಳು ನೀಡಿದ ದೇಶವಾಗಿದೆ. ಇಲ್ಲಿನ ಮಹಿಳೆಯರು ಸ್ವತಂತ್ರವಾಗಿ ಮನೆಯಿಂದ ಹೊರಗಡೆ ಬಂದು ಕೆಲಸ ನಿರ್ವಹಿಸಬಹುದು ಆದರೆ ಬೇರೆ ದೇಶಗಳಲ್ಲಿ ಮಹಿಳೆಯರು ಮನೆಯಿಂದ ಒಂಟಿಯಾಗಿ ಹೊರಗಡೆ ಬಂದರೆ ಶಿಕ್ಷೆ ನೀಡುವ ಕಾನೂನು ಇದೆ.ಮನುಷ್ಯನ ಜೀವನ ಇರುವವರೆಗೂ ಸುಖ ಶಾಂತಿ ನೆಮ್ಮದಿಯಿಂದ ಜೀವಿಸಬೇಕು, ಜಿಪುಣತನದಿಂದ ಅಶಾಂತಿ ಮೂಡುತ್ತದೆ ಆದ್ದರಿಂದ ದುಡಿಯುವುದರಲ್ಲಿ ಸ್ವಲ್ಪ ಭಾಗ ಸಮಾಜ ಸೇವೆಗೆ ವಿನಿಯೋಗ ಮಾಡಿದರೆ ಸಾರ್ಥಕ ಜೀವನವೆನಿಸುತ್ತದೆ. ನಮ್ಮ ಆಚಾರ ವಿಚಾರಗಳು ಸುಂದರವಾಗಿದ್ದರೆ ನಮ್ಮ ಬದುಕು ಕೂಡ ಸುಂದರವಾಗಿರಲು ಸಾಧ್ಯವಿದೆ. ಸಂಸಾರದಲ್ಲಿ ಹೊಂದಾಣಿಕೆ ಮುಖ್ಯ. ಸಮಾಜದಲ್ಲಿ ಮಹಿಳೆಯರು ಹಾಗೂ ಮಕ್ಕಳು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. ಶೋಷಣೆಗೆ ಸಿಲುಕಿದವರಿಗೆ ನಾವು ಸಹಾಯ ಮಾಡಬೇಕು ಇದರಿಂದ ನೊಂದವರನ್ನು ಕೂಡ ಸಮಾಜದ ಮುಖ್ಯ ವೇದಿಕೆಗೆ ಕರೆತರಲು ಸಹಾಯಕವಾಗಲಿದೆ. ಸಮಾಜದಲ್ಲಿ ಕೆಲ ಸೊಸೆಯರಿಂದ ಅತ್ತೆ ಮಾವ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಅಂತವರಿಗಾಗಿ ಹಿರಿಯ ನಾಗರಿಕ ವೇದಿಕೆಯಿಂದ ಇಲ್ಲಿ ತಮ್ಮ ಅಹವಾಲು ಸಲ್ಲಿಸಿ ನ್ಯಾಯ ಪಡೆಯಬಹುದು. ಎಂದು ಹೇಳಿದರು. ಇದೇ ವೇಳೆ ಮಹಿಳೆಯರಿಗೆ ಕೆಲವು ಕಾನೂನು ಅರಿವು ಹಾಗೂ ಮಾಹಿತಿ ಒದಗಿದರು.
ಮಾಜಿ ಜಿ.ಪಂ ಸದಸ್ಯೆ ಚಂಚಲಾ ಚಂಚಲ ಕುಮಾರಸ್ವಾಮಿ ಮಾತನಾಡಿ,ಹೆಣ್ಣು ಎಂದರೆ ಹಣತೆ ಇದ್ದಂತೆ , ತನನ್ನು ತಾನು ಸುಟ್ಟುಕೊಂಡು ಜಗತ್ತಿಗೆ ಹೇಗೆ ಬೆಳಕು ನೀಡುತ್ತದೆ ಅದೇ ರೀತಿ ಹೆಣ್ಣು ಕೂಡ ತನ್ನ ನೋವುಗಳನ್ನು ನುಂಗಿಕೊಂಡು ಸಮಾಜದ ಮುಂದೆ ನಗುತ ಇರುತ್ತಾಳೆ. ಶಿಸ್ತು, ಸಮಯ ಪಾಲನೆ ಮಹಿಳೆಯರಿಂದ ಮಾತ್ರ ಸಾಧ್ಯ. ಮಹಿಳೆಯರಿಗೆ ಬೇಕಾಗಿರುವ ಸೌಲಭ್ಯ ಒದಗಿಸಲು ಶಾಸಕರು ಬದ್ಧರಾಗಿದ್ದಾರೆ ಎಂದು ಭರವಸೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೆಳಗೋಡು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರಾದ ಸವಿತ ನಿತ್ಯಾನಂದ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇವಿಕಾ ಮಾವಿನಕೋಡು,ಸಂಘ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ರೇಖಾ ಸುರೇಶ್ ರವರಿಗೆ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಲೋಕೇಶ್, ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ , ಕಾರ್ಯದರ್ಶಿ ವಿಜಯ ಧನ್ಯ ಕುಮಾರ್, ಖಜಾಂಚಿ ವೀಣಾ ನಾಗೇಶ್ ,ಅಖಿಲ ಭಾರತ ವೀರಶೈವ ಮಹಾ ಸಭಾದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಚೈತ್ರ ನವೀನ್,ಬೆಳಗೋಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್,ಸೇರಿದಂತೆ ಅಕ್ಕಮಹಾದೇವಿ ವೇದಿಕೆಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.