ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗೆ ಸಕಲೇಶಪುರ ತಾಲೂಕಿನ ಎರಡು ಶಾಲೆಗಳು ಆಯ್ಕೆ
ವಿದ್ಯಾರ್ಥಿಗಳಿಗೆ ಪೊಲೀಸರಿಂದ ಸ್ವಯಂ ರಕ್ಷಣೆಯ ಪಾಠ..!
ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆಯ ತರಬೇತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂಬ ವಿಭಾಗ ಸ್ಥಾಪಿಸಲಾಗಿದೆ. ಇದರ ಮೂಲಕ ಸಕಲೇಶಪುರ ತಾಲೂಕಿನ ಯಸಳೂರಿನ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಸಕಲೇಶಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ.
ಎನ್‌ಸಿಸಿ ಮಾದರಿಯಲ್ಲಿಯೇ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಮೂಲಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ. ಯಾರಾದರೂ ದಾಳಿ ಮಾಡಿದರೆ, ಸ್ವಯಂ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಿಳಿಸುತ್ತಾರೆ. ಕರಾಟೆ, ಯೋಗ ಸೇರಿ ಇತರೆ ಸ್ವಯಂ ರಕ್ಷಣೆ ವಿಧಾನಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ.
ಈ ತರಬೇತಿ ನಡುವೆ ಪೊಲೀಸ್ ಠಾಣೆಗೆ, ಜಿಲ್ಲಾ ಪೊಲೀಸ್ ಕಚೇರಿಗೆ, ಅಗ್ನಿ ಶಾಮಕ ದಳ, ಆಸ್ಪತ್ರೆ ಹಾಗೂ ಇತರ ಕಚೇರಿಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಎಲ್ಲಾ ಮಾಹಿತಿ ತಿಳಿಸಿಕೊಡಲಾಗುತ್ತಿದೆ. ಇದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರ ಕನಸಿನ ಯೋಜನೆ ಆಗಿತ್ತು. ಈ ಹಿನ್ನೆಲೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಎಂದು ನಾಮಕರಣ ಮಾಡಿ, ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 20 ಸರಕಾರಿ ಶಾಲೆಯನ್ನು ಆಯ್ಕೆ ಮಾಡಿ ಸಕಲೇಶಪುರ ತಾಲೂಕಿನಲ್ಲಿ ಎರಡು ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ಜಿಲ್ಲಾ ಪೊಲೀಸ್ ಅಧಿಕ್ಷಕರ ಕಡೆಯಿಂದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಗೆ ಆಯ್ಕೆ ಮಾಡಿದ ಶಾಲೆಗಳ ಪಟ್ಟಿಯನ್ನು ಅಂತಿಮಗೊಳಿಸಿ ಕಳಿಸಿಕೊಡಲಾಗಿದೆ.