ಪಾಳ್ಯ : ಅವೈಜ್ಞಾನಿಕ ಕಾಮಗಾರಿ ವಿರುದ್ಧ ಕರವೇ ಆಕ್ರೋಶ
ಸರ್ವಿಸ್ ರಸ್ತೆ ಇಲ್ಲದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ನೀಡಿರುವುದ್ದರಿಂದ ಅಪಘಾತಕ್ಕೆ ಕಾರಣವಾಗಲಿದೆ – ರಘು ಪಾಳ್ಯ ಅಸಮಾಧಾನ.
ಸಕಲೇಶಪುರ/ಆಲೂರು : ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ರಾಷ್ಟ್ರೀಯ ಹೆದ್ದಾರಿಗೆ ಹಳ್ಳಿ ಕಡೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಯಾವುದೇ ಸರ್ವಿಸ್ ರಸ್ತೆಗಳು ನೀಡದೆ ನೇರವಾಗಿ ಹೆದ್ದಾರಿಗೆ ಸಂಪರ್ಕ ಕಲ್ಪಿಸಿರುವುದರಿಂದ ಅಪಘಾತಕ್ಕೆ ಅಹ್ವಾನ ನೀಡಿದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹಾಗೂ ಸಕಲೇಶಪುರ, ಆಲೂರು ತಾಲೂಕಿನ ಉಸ್ತುವಾರಿಗಳಾದ ರಘು ಪಾಳ್ಯ ಮಾತನಾಡಿ, ಪಾಳ್ಯ ಗ್ರಾಮದ ಸಮೀಪ ಕಣದಹಳ್ಳಿಯಿಂದ ಮಗ್ಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಪ್ರತಿಭಟನೆ ನಡೆಸಿತ್ತು. ಅಂದು ಸ್ಥಳಕ್ಕೆ ಬಂದ ಅಧಿಕಾರಿಗಳು ಸಂಘಟನೆಯ ಕಾರ್ಯಕರ್ತರಿಗೆ ಭರವಸೆ ನೀಡಿ ಹೋಗಿದ್ದರು. ಆದರೆ ಕಳೆದ ರಾತ್ರಿ ಏಕಾಏಕಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಯಾವುದೇ ಸರ್ವಿಸ್ ರಸ್ತೆ ಮಾಡದೆ ಮಗ್ಗೆ ಕಡೆಯಿಂದ ಬರುವ ವಾಹನಗಳಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸಿರುವುದರಿಂದ ಅಪಘಾತಗಳು ಸಂಭವಿಸುವುದು ನಿಶ್ಚಿತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ ಹಳ್ಳಿ ರಸ್ತೆಯಿಂದ ನೇರವಾಗಿ ಹೆದ್ದಾರಿಗೆ ಸಂಪರ್ಕ ನೀಡಿರುವುದರಿಂದ ವಾಹನ ಸವಾರರಿಗೆ ನಿಯಂತ್ರಣಕ್ಕೆ ಸಿಗದೇ ಅಪಘಾತವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಈ ರೀತಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ವಿಸ್ ರಸ್ತೆ ನಿರ್ಮಿಸಲಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಪ್ರಸನ್ನ, ರಘು ಸೇರಿದಂತೆ ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಇದ್ದರು.