ಕೇಂದ್ರ ಸರ್ಕಾರದಿಂದ ಜನಪರ ಬಜೆಟ್: ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್.
ಸರ್ವರ ಅಭಿವೃದ್ಧಿ ಮಂತ್ರವೇ ಈ ಬಾರಿಯ ಬಜೆಟ್
ಸಕಲೇಶಪುರ :ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23 ಸಾಲಿನ ಆಯವ್ಯಯವು ಕೋವಿಡ್-19 ನಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಸಕಲೇಶಪುರ,ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಹೇಳಿದರು.
ಬಜೆಟ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಗ್ರಾಮೀಣ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಸರ್ವರ ಅಭಿವೃದ್ಧಿಯ ಬಜೆಟ್‌ನ್ನು ಮಂಡಿಸಿದ್ದು, ರೈತರು, ಯುವ ಜನರು, ಮಹಿಳೆಯರು, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ, ಹಿಂದುಳಿದವರ ಹಾಗೂ ಆರ್ಥಿಕ ದುರ್ಬಲರ ಅಭಿವೃದ್ಧಿಯ ಮಂತ್ರದ ಜಪ ಮಾಡಲಾಗಿದೆ. ಹಾಗೆಯೇ, ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಳ ಮಾಡಿ ತೆರಿಗೆ ಪಾವತಿದಾರರಿಗೂ ಸಿಹಿ ನೀಡಲಾಗಿದೆ.ಲೋಕಸಭೆಯಲ್ಲಿಂದು ತಮ್ಮ ೫ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಅಮೃತ ಕಾಲದ ಮೊದಲ ಬಜೆಟ್ ಇದಾಗಿದೆ ಎಂದು ಹೇಳಿ ರೈತರು, ಯುವ ಜನರು, ಹಸಿರು ಕ್ರಾಂತಿ, ಉದ್ಯೋಗಾವಕಾಶ, ಆರ್ಥಿಕ ನೆರವು,ಮಹಿಳೆಯರ ಸಬಲೀಕರಣದ ಅಂಶಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ.ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಕೃಷಿಕರ ಸಾಲ ಯೋಜನೆಯ ಗುರಿಯನ್ನು ೨೦ ಲಕ್ಷ ಕೋಟಿವರೆಗೆ ವಿಸ್ತರಿಸುವ ಘೋಷಣೆ ಮಾಡಲಾಗಿದೆ. ಕೃಷಿ ಮಾತ್ರವಲ್ಲದೆ ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆಗೂ ಹೆಚ್ಚಿನ ಒತ್ತು ನೀಡಿ ಭರಪೂರ ಅನುದಾನ ಒದಗಿಸಲಾಗಿದೆ.ಪಿಎಂ ಮತ್ಸ್ಯ ಸಂಪದ ಯೋಜನೆಗೆ ೬ ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದು, ಸಿರಿಧಾನ್ಯಗಳ ಕೃಷಿಗೆ ಶ್ರೀ ಅನ್ನಗೋಧಿ, ಶ್ರೀ ಅನ್ನರಾಗಿ, ಶ್ರೀ ಅನ್ನಸಜ್ಜೆ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿ ಸಿರಿಧಾನ್ಯಗಳ ಸಂಶೋಧನೆಗೆ ಶ್ರೀ ಅನ್ನ ಸಂಶೋಧನಾ ಕೇಂದ್ರವನ್ನು ಹೈದರಾಬಾದ್‌ನಲ್ಲಿ ಆರಂಭಿಸುವ ಘೋಷಣೆ ಮಾಡಿದ್ದಾರೆ.ಬಜೆಟ್‌ನಲ್ಲಿ ಹಸಿರು ಕ್ರಾಂತಿಗೆ ಉತ್ತೇಜನ ನೀಡಲಾಗಿದ್ದು, ಯುವ ಸಬಲೀಕರಣ ಹಾಗೂ ಮಹಿಳಾ ಸಬಲೀಕರಣಕ್ಕೂ ಯೋಜನೆಗಳನ್ನು ಪ್ರಕಟಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್ ಯೋಜನೆಗಳಿಗೆ ನೆರವು ನೀಡುವ ಘೋಷಣೆಯನ್ನೂ ಮಾಡಲಾಗಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜನಪರ ಕಾರ್ಯ ಯೋಜನೆಗಳು ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ಮನವರಿಕೆಯಾಗಿದ್ದು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.