ಸುವರ್ಣ ಮಹೋತ್ಸವದ” ಸಂಭ್ರಮದಲ್ಲಿ ಶ್ರೀ ವಿನಾಯಕ ವಿದ್ಯಾ (ರಿ) ಸಂಸ್ಥೆ,ಬಿ ಸಿದ್ದಣ್ಣಯ್ಯ ಪ್ರೌಢಶಾಲೆ ಬಾಳ್ಳುಪೇಟೆ. ಭಾಗ-೧
ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ರವರ ಲೇಖನ ಸರಣಿ ಭಾಗ -01
ಯಾವುದೇ ಸಂಸ್ಥೆಗೆ ಶಿಕ್ಷಣದಲ್ಲಿ 50 ವರ್ಷಗಳ ಅವಿರತ ಶ್ರಮವನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತಹ ಒಂದು ಹೆಮ್ಮೆಯ ಸಂಸ್ಥೆ ಶ್ರೀ ವಿನಾಯಕ ವಿದ್ಯಾ ಸಂಸ್ಥೆ ಬಿ. ಸಿದ್ದಣ್ಣಯ್ಯ ಪ್ರೌಢಶಾಲೆ, ಬಾಳ್ಳುಪೇಟೆ.
ಐದು ದಶಕಗಳಿಂದ ಅರಿವಿನ ಜ್ಯೋತಿಯಾಗಿ ಬೆಳಗುತ್ತಾ ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿರುವ ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ ಅರ್ಧ ಶತಮಾನದ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಿ ಶಾಲೆಯ ‘ಸುವರ್ಣ ಮಹೋತ್ಸವ’ ಸಂಭ್ರಮದಲ್ಲಿದೆ. ನಾನು ಈ ಶಾಲೆಯಲ್ಲಿ ವಿದ್ಯೆ ಕಲಿತ ಹಿರಿಯ ವಿದ್ಯಾರ್ಥಿಯಾಗಿ ಶಾಲೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದ್ದೇನೆ ಏನಾದರೂ ವ್ಯತ್ಯಾಸವಾಗಿದ್ದಲ್ಲಿ ದಯವಿಟ್ಟು ಕ್ಷಮೆ ಇರಲಿ.
ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದ 70ರ ದಶಕದಲ್ಲಿ ಶ್ರೀ ಬಿಗ. ಜಿ. ಗುರಪ್ಪ ನವರು ಹಾಗೂ ಬಿ. ಸಿದ್ದಣ್ಣಯ್ಯ ನವರು ಹಾಗು ಹಲವಾರು ಮಹನೀಯರ ಶ್ರಮದಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ 1970 ರಲ್ಲಿ ಶ್ರೀ ವಿನಾಯಕ ವಿದ್ಯಾಸಂಸ್ಥೆ’ ಯಾಗಿ ಸಂಸ್ಥೆಯ ಚಿಗುರೊಡೆಯಿತು.
ಬಾಳ್ಳುಪೇಟೆಯ ಮಹನೀಯರು ಬುದ್ಧಿವಂತರು. ಹೃದಯ ಶ್ರೀಮಂತಿಕೆ ಉಳ್ಳವರು. ವಿದ್ಯೆಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಐವತ್ತು ವರ್ಷಗಳ ಹಿಂದೆ ಹಿರಿಯರು ಬಡವರಿಗೆ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಶಿಕ್ಷಣ ಸಂಸ್ಥೆಯನ್ನು ತೆರೆದಿರುವುದು ಅಭಿನಂದನೀಯ. ಸಂಸ್ಥೆಯು ಪ್ರಸ್ತುತ ಹೆಮ್ಮರವಾಗಿ ಬೆಳೆದಿದ್ದು, ಹಿರಿಯರು ಕಂಡ ಕನಸು ನನಸಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನ, ಸಕಲೇಶಪುರ ನಡುವೆ ಮಲೆನಾಡು ಪ್ರದೇಶದಲ್ಲಿ ನಮ್ಮ ಹೆಮ್ಮೆಯ ವಿದ್ಯಾಸಂಸ್ಥೆ ಮತ್ತು ನಾವುಗಳು ಕೆಲಸ
ಮಾಡಿದ ಅಚ್ಚು ಮೆಚ್ಚಿನ ನಮ್ಮೆಲ್ಲರ ಬಿ.ಸಿದ್ದಣ್ಣಯ್ಯ ಪ್ರೌಢಶಾಲೆಯಿದೆ.ಬಾಳ್ಳುಪೇಟೆಯು ಹಾಸನಕ್ಕೆ,ಬೆಂಗಳೂರಿಗೆ,ಸಕಲೇಶಪುರಕ್ಕೆ ಮಂಗಳೂರಿಗೆ,ಮಡಿಕೇರಿಗೆ ಮಾರ್ಗ ತೋರಿಸುವ ಒಂದು ಮುಖ್ಯ ಕೇಂದ್ರ.
ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ನಿತ್ಯ ಹರಿದ್ವರ್ಣದ ನಡುವೆ, ಕಾಫಿ-ಏಲಕ್ಕಿ, ಕಪ್ಪು ಮೆಣಸು, ಭತ್ತ, ಶುಂಠಿ ಬೆಳೆಯುವ ಪ್ರದೇಶದಲ್ಲಿ ಈ ಪ್ರೌಢಶಾಲೆಯು ಬಡ
ಮಕ್ಕಳ, ಕೂಲಿ ಕಾರ್ಮಿಕರ ಮಕ್ಕಳಿಗೆ ಆಶಾಕಿರಣವಾಗಿ ಕಂಗೊಳಿಸುತ್ತಿದೆ.ಬಾಳ್ಳುಪೇಟೆ ಹಾಗೂ ಇದರ ಸುತ್ತ-ಮುತ್ತ ಅನೇಕ ಹಳ್ಳಿಗಳಿದ್ದು ಕಾಫಿ ತೋಟಗಳಿದ್ದು,ಗದ್ದೆಗಳಿದ್ದು ವ್ಯವಸಾಯವೇ ಪ್ರಧಾನ ವೃತ್ತಿಯಾಗಿದೆ. ಹೀಗಾಗಿ ಇಲ್ಲಿ ಬಡ ಮಕ್ಕಳು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚು. ಅಲ್ಲಲ್ಲೇ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು
ಇಲ್ಲಿನ ಮಕ್ಕಳ ವಿದ್ಯಾಭ್ಯಾಸವು ಇಲ್ಲಿಗೇ ನಿಲ್ಲುತ್ತಿತ್ತು. ಮುಂದಿನ ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ 15-25
ಕಿ.ಮೀ. ದೂರದ ಯಸಳೂರು, ರಾಯರಕೊಪ್ಪಲು, ಸಕಲೇಶಪುರ, ಆಲೂರು ಅಥವಾ 40-45 ಕಿ.ಮೀ. ದೂರದ ಹಾಸನಕ್ಕೆ ಹೋಗಬೇಕಿತ್ತು.
“ನಡೆದಾಡುವ ದೇವರು” ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಪರಮ ಭಕ್ತರು ಈ ಮಲೆನಾಡಿನ
ಜನರು, ವ್ಯವಸಾಯಕ್ಕೆ ಪ್ರಸಿದ್ಧವಾದ ಈ ಸುತ್ತಮುತ್ತಲಿನ ಗ್ರಾಮವಾದ ಬಾಳುಪೇಟೆಯಲ್ಲಿ ಪ್ರೌಢಶಾಲೆ ಇಲ್ಲದಿರುವುದು ಬಡ ಕೂಲಿ-ಕಾರ್ಮಿಕರ ಮಕ್ಕಳು ಪ್ರೌಢ ಶಿಕ್ಷಣ ಇಲ್ಲದೆಯೇ
ಕೂಲಿ ಕಾರ್ಮಿಕರಾಗಿಯೇ ಜೀವನ ಸಾಗಿಸುತ್ತಿರುವುದನ್ನು ಕಂಡು ಮನಗಂಡು ಪೂಜ್ಯರು
ಬಾಳ್ಳುಪೇಟೆಯಲ್ಲಿ ಪ್ರೌಢಶಾಲೆಯನ್ನು ತೆರೆದು ಈ ಬಡ ಮಕ್ಕಳ ಜ್ಞಾನಾರ್ಜನೆಯ ಹಸಿವನ್ನು ನಿವಾರಿಸಲು ತೀರ್ಮಾನಿಸಿದರು.1970ರ ಜನವರಿಯಲ್ಲಿ ಬಾಳ್ಳುಪೇಟೆಯ
ಹಿರಿಯ ಹಾಗೂ ಕಿರಿಯ ಕಾಫಿ ಬೆಳೆಗಾರರನ್ನು ಬಿ.ಸಿದ್ದಣ್ಣಯ್ಯರವರ ಮನೆಯಲ್ಲಿ ಶ್ರೀ ಬಿ.ಜಿ.
ಗುರಪ್ಪನವರ ನೇತೃತ್ವದಲ್ಲಿ ಸೇರಿಸಿ ತಮ್ಮ ಪ್ರಸ್ತಾಪವನ್ನು ಮುಂದಿಟ್ಟು ಕೆಲವು ಸಲಹೆಗಳನ್ನು ನೀಡಿ ಚರ್ಚಿಸಿದರು. ಪೂಜ್ಯರ ಪರಮ ಭಕ್ತರಾದ ಬಾಳುಪೇಟೆಯ ಕಾಫಿ ಬೆಳೆಗಾರರು ಸ್ವಾಮೀಜಿಯವರ ಸಲಹೆಯನ್ನು “ಆಶೀರ್ವಾದ ಹಾಗೂ ಮಹಾಪ್ರಸಾದ” ಎಂದು ಸ್ವೀಕರಿಸಿ ಪ್ರೌಢಶಾಲೆಯನ್ನು ಕೂಡಲೇ ತೆರೆಯಲು ಸ್ವಾಮೀಜಿಯವರ ಸನ್ನಿಧಿಯಲ್ಲೇ ನಿರ್ಧರಿಸಿದರು.ಶ್ರೀ ಬಿ.ಜಿ ಗುರಪ್ಪನವರು ಸ್ವಇಚ್ಛೆಯಿಂದ 4 ಏಕರೆ ಸ್ಥಳವನ್ನು ನೀಡಲು ಮುಂದೆ ಬಂದರು.
ಶ್ರೀ ಬಿ.ಸಿದ್ದಣ್ಣಯ್ಯನವರು ಸ್ವಲ್ಪ ಹಣ ಕೊಡಬೇಕು ಮತ್ತು
ಹಣ ನೀಡಬೇಕು“ಪ್ರಮುಖ ದಾನಿಗಳು” ಆಗಬೇಕು, ಶ್ರೀ ಬಿ.ಜಿ.ಗುರಪ್ಪನವರು ಸ್ಥಳ ದಾನಿಗಳು” ಆಗಬೇಕು ಇಂತಹವರುಗಳು ಇಷ್ಟು ಸಹಾಯ ಮಾಡಬೇಕು ಎಂದು ಶ್ರೀಗಳು ಲಿಖಿತದ ಮೂಲಕ ತಿಳಿಸಿದರು. ಪೂಜ್ಯರು ಆಸೆಯನ್ನು “ಮಹಾ ಪ್ರಸಾದ” ವಾಗಿ ಸ್ವೀಕರಿಸಿ ಪೂಜ್ಯರ ಸನ್ನಿಧಿಯಲ್ಲೇ ವಿದ್ಯಾಸಂಸ್ಥೆಗೆ “ ಶ್ರೀ ವಿನಾಯಕ
ವಿದ್ಯಾ ಸಂಸ್ಥೆ ಮತ್ತು ಪ್ರೌಢಶಾಲೆಗೆ ಶ್ರೀ ವಿನಾಯಕ ಪ್ರೌಢಶಾಲೆ” ಎಂದು ಹೆಸರಿಟ್ಟು ಸ್ಥಾಪಿಸಲು ನಿರ್ಧರಿಸಿ
ಆಡಳಿತ ಮಂಡಳಿಯನ್ನು ರಚಿಸಿದರು.
1) ಶ್ರೀ ಬಿ.ಜಿ. ಗುರುಪ್ಪನವರು, ಅಧ್ಯಕ್ಷರು, ಬಾಳುಪೇಟೆ.
2) ಶ್ರೀ ಬಿ.ಎಸ್. ದೇವರಾಜ್‌ರವರು, ಉಪಾಧ್ಯಕ್ಷರು, ಬಾಳುಪೇಟೆ.
3) ಶ್ರೀ ಬಿ. ಶಾಂತರಾಜ್‌ರವರು, ಉಪಾಧ್ಯಕ್ಷರು, ಬಾಳ್ಳುಪೇಟೆ.
4) ಶ್ರೀ ಬಿ.ಎಲ್. ಗುರುಪ್ರಕಾಶ್‌ರವರು, ಕಾರ್ಯದರ್ಶಿ, ಬಾಳುಪೇಟೆ
5) ಶ್ರೀ ಬಿ. ಶಶಿಧರ್‌ರವರು, ಸಹ ಕಾರ್ಯದರ್ಶಿ, ಬಾಳ್ಳುಪೇಟೆ.
6) ಶ್ರೀ ಬಿ. ಮಲ್ಲಪ್ಪನವರು, ಖಜಾಂಚಿ, ಬಾಳುಪೇಟೆ.
7) ಶ್ರೀ ಬಿ.ಎಂ. ಮಹಾರುದ್ರಪ್ಪನವರು, ಸದಸ್ಯರು, ಬಾಳ್ಳುಪೇಟೆ.
8) ಶ್ರೀ ಬಿ.ಆರ್. ಗುರುದೇವ್‌ರವರು, ಸದಸ್ಯರು, ಬಾಳ್ಳುಪೇಟೆ:
9) ಶ್ರೀ ಬಿ.ಎಸ್. ಮಲ್ಲಿಕಾರ್ಜುನ್‌ರವರು, ಸದಸ್ಯರು, ಬಾಳ್ಳುಪೇಟೆ.
10) ಶ್ರೀ ಬಿ.ಡಿ. ಬಸವಣ್ಣನವರು, ಸದಸ್ಯರು, ಬಾಳುಪೇಟೆ.
11) ಶ್ರೀ ಬಿ.ಎ.ಜಗನ್ನಾಥ್‌ರವರು, ಸದಸ್ಯರು, ಬಾಳ್ಳುಪೇಟೆ.
12) ಶ್ರೀ ಬಿ.ಡಿ. ವಿಶ್ವನಾಥ್‌ರವರು, ಸದಸ್ಯರು, ಬಾಳ್ಳುಪೇಟೆ.
13) ಶ್ರೀ ಬಿ.ಎಸ್.ಜಯಪ್ರಕಾಶ್‌ರವರು, ಸದಸ್ಯರು, ದಮ್ಮನಗುಂಡಿ
14) ಶ್ರೀ ಬಿ. ಬಸಪ್ಪನವರು, ಸದಸ್ಯರು, ಬಾಗೆ
15) ಶ್ರೀ ಎಂ. ಬಸವೇಗೌಡ್ರುರವರು, ಸದಸ್ಯರು, ಮೆಣಸಮಕ್ಕಿ
16) ಶ್ರೀ ಬಿ. ಪ್ರಕಾಶ್‌ರವರು, ಸದಸ್ಯರು, ಬಾಳುಪೇಟೆ.
17) ಶ್ರೀ ಶಾಲೆಯ ಮುಖ್ಯೋಪಾಧ್ಯಾಯರು (1970), ಸದಸ್ಯರು,
ಶ್ರೀ ವಿನಾಯಕ ವಿದ್ಯಾ ಸಂಸ್ಥೆ” ಯ ನೊಂದಣಿ ಮಾಡುವುದು. ಮತ್ತು “ಶ್ರೀ ವಿನಾಯಕ ಪ್ರೌಢಶಾಲೆ” ಯನ್ನು ತೆರೆಯಲು ಸರ್ಕಾರದ ಅನುಮತಿ ಪಡೆಯವುದು ಈ ಕೆಲಸಗಳನ್ನು ಹಾಸನದ ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷರು ಮತ್ತು ನಮ್ಮ ವಿದ್ಯಾಸಂಸ್ಥೆಯ ಸಂಸ್ಥಾಪಕ
ಅಧ್ಯಕ್ಷರಾದ ಶ್ರೀ ಬಿ.ಜಿ. ಗುರಪ್ಪ ನವರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ದೇವರಾಜ್‌ರವರು,ಉಪಾಧ್ಯಕ್ಷರಾದ ಮತ್ತು ಸಕಲೇಶಪುರ ತಾಲ್ಲೂಕು ಬೋರ್ಡ್‌ನ ಅಧ್ಯಕ್ಷರಾದ ಶ್ರೀ
ಬಿ.ಶಾಂತರಾಜ್‌ರವರು, ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ಗುರುಪ್ರಕಾಶ್ ಮತ್ತು ಸದಸ್ಯರಾದ ಶ್ರೀ ಬಿ.ಎಂ.ಮಹಾರುದ್ರಪ್ಪನವರಿಗೆ ಪೂಜ್ಯರು ವಹಿಸಿದರು. ಇವರುಗಳ ಪರಿಶ್ರಮದಿಂದ ಸಂಘ-ಸಂಸ್ಥೆಗಳ ನೊಂದಣಾಧಿಕಾರಿಗಳು ಮೈಸೂರು-ಬೆಂಗಳೂರು ಇವರ ಆದೇಶ ಸಂಖ್ಯೆ ಎಸ್.ನಂ. 4/70-71, ಹಾಸನ ದಿನಾಂಕ 16-6-1970 ರಂದು ವಿದ್ಯಾಸಂಸ್ಥೆ ನೊಂದಣಿ ಆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು-ಬೆಂಗಳೂರು ಇದರ ಆದೇಶ ಸಂಖ್ಯೆ ಈ.7(ಎ)-1876-544/1969-70 ದಿನಾಂಕ : 30-5-1970 ರಂತೆ ಶ್ರೀ ವಿನಾಯಕ ಪ್ರೌಢಶಾಲೆ ತೆರೆಯಲು ಸರ್ಕಾರ ಅನುಮತಿ ನೀಡಿತು.
*ಶಾಲೆಯು ನಡೆದು ಬಂದ ಹೆಜ್ಜೆಗಳು.*
ನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು- ಬೆಂಗಳುರು ಇವರ ಆದೇಶ (ಸಂಖ್ಯೆ ಈ.7(ಎ)-9876-544/1969-70 ದಿನಾಂಕ : 30-5-1970 ರ ಪ್ರಕಾರ ಜೂನ್ ತಿಂಗಳಲ್ಲಿ 8ನೇ ತರಗತಿಯನ್ನು 60 ವಿದ್ಯಾರ್ಥಿಗಳೊಂದಿಗೆ ಬಾಳುಪೇಟೆ ಗ್ರಾಮ ದೇವತೆಯಾದ
ದೇವೀರಮ್ಮ ದೇವಸ್ಥಾನದಲ್ಲಿ ಪ್ರಾರಂಭಿಸಲಾಯಿತು. ಆಗ ಶ್ರೀ ದೊರೆಸ್ವಾಮಿಯವರು ನಿವೃತ್ತ ಮುಖ್ಯ ಶಿಕ್ಷಕರು, ಮುಖ್ಯೋಪಾಧ್ಯಾಯರಾಗಿಯೂ, ಶ್ರೀ ರಾಮನಾಥ್‌ರವರು ಮತ್ತು ಶ್ರೀಮತಿ ಗಿರಿಜಮ್ಮನವರು ಸಹ ಶಿಕ್ಷಕರಾಗಿ, ಶ್ರೀ ಬಿ.ಕೆ. ನಾಗರಾಜುರವರು ಗುಮಾಸ್ತರಾಗಿ ಸೇವೆ ಪ್ರಾರಂಭಿಸಿದರು. 71-72ನೇ ಸಾಲಿನಲ್ಲಿ ಶ್ರೀ ಕೆ.ಡಿ.ದಿವಾಕರ ಇವರು ಜೂನ್ 1971 ರಲ್ಲಿ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು. ಇವರ ಜೊತೆ ಶ್ರೀ ಕೆ.ಎ. ರಾಮನಾಥ್‌ರವರು,
ಶ್ರೀಮತಿ ಅಂಬಿಕಾರವರು ಸಹ ಶಿಕ್ಷಕರಾಗಿಯೂ, ಶ್ರೀ ಬಿ.ಕೆ. ನಾಗರಾಜುರವರು ಗುಮಾಸ್ತರಾಗಿ ಸೇವೆ ಮುಂದುವರೆಯಿತು. 71-72 ನೇ ಸಾಲಿನಲ್ಲಿ 9ನೇ ತರಗತಿಯನ್ನು ಬಾಳುಪೇಟೆ ಗ್ರಾಮ
ಪಂಚಾಯಿತಿಯಲ್ಲಿ ತೆರೆಯಲಾಯಿತು. 1972-73ನೇ ಸಾಲಿನಲ್ಲಿ ಹತ್ತನೇ ತರಗತಿಯನ್ನು ಕೆಳತೊಟ್ಟಿ ಶ್ರೀ ಬಿ.ಶಾಂತಪ್ಪನವರ ನೂತನ ಮನೆಯಲ್ಲಿ ಪ್ರಾರಂಭಿಸಲಾಯಿತು. ಹೀಗೆ 8,9,10 ನೇ ತರಗತಿಗಳು ಬೇರೆ-ಬೇರೆ ಕಟ್ಟಡದಲ್ಲಿ ನಡೆಯುತ್ತಿದ್ದವು. ಇದೇ ವೇಳೆಗೆ ಆಗಾಗಲೇ ಶ್ರೀ ಬಿ.ಜಿ ಗುರಪ್ಪನವರು ನೀಡಿದ 4 ಏಕರೆ ಜಾಗದಲ್ಲಿ ಹೊಸ ಕಟ್ಟಡದ ಕಾಮಗಾರಿ ಮುಕ್ತಾಯದ
ಹಂತದಲ್ಲಿತ್ತು.ದಿನಾಂಕ 5-2-1973 ರಂದು ಪರಮ ಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಘನ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಚಿವರಾದ ಶ್ರೀ ಎ.ಆರ್. ಬದರೀನಾರಾಯಣ ರವರು ಬಿ.ಸಿದ್ದಣ್ಣಯ್ಯ ಪ್ರೌಢಶಾಲಾ ಕಟ್ಟಡದ ಪ್ರಾರಂಭೋತ್ಸವವನ್ನು ನೆರವೇರಿಸಿದರು. ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕರಾದ ಶ್ರೀ ಕೆ.ಎಂ. ರುದ್ರಪ್ಪನವರು ದಾನಿಗಳ ಭಾವಚಿತ್ರಗಳನ್ನು
ಅನಾವರಣ ಮಾಡಿದರು. 8-2-1973ರಂದು ಸುಸಜ್ಜಿತವಾದ ಶಾಲಾ ಕಟ್ಟಡಕ್ಕೆ ಪೂಜೆಯೊಂದಿಗೆ ವಿದ್ಯಾರ್ಥಿಗಳು ಪ್ರವೇಶಿಸಿದರು.
ಶಾಲಾ ಹೆಸರು ಬದಲಾವಣೆ :
ಇದೇ ವೇಳೆಗೆ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು-ಬೆಂಗಳೂರು ಇವರ ಆದೇಶ ಸಂಖ್ಯೆ ಈ.7(ಸಿ)-109663-417/ 71-72/ 28-3-1972ರ ಪ್ರಕಾರ ‘ಶ್ರೀ ವಿನಾಯಕ ಪ್ರೌಢಶಾಲೆ’ ಯನ್ನು ಪ್ರಮುಖ ದಾನಿಗಳಾದ ಬಿ.ಸಿದ್ದಣ್ಣಯ್ಯನವರ ಹೆಸರಿನಲ್ಲಿ ‘ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ’ ಎಂದು ಬದಲಾಯಿಸಲಾಯಿತು.
(ಮುಂದುವರೆಯುವುದು)
*ಧೀಮಂತ ವ್ಯಕ್ತಿ ಕೊಡಗೈದಾನಿ ಶ್ರೀ ಬಿ. ಸಿದ್ದಣ್ಣಯ್ಯನವರು.*
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ರಸ್ತೆಮನೆ ಮಲ್ಲೇಗೌಡರ ಹಿರಿಯ ಪುತ್ರರಾದ ಸಿದ್ಧಣ್ಣಯ್ಯನವರು ಅಂದಿನ ಎಲ್.ಎಸ್.ವರೆಗೆ ಓದಿದರೂ ಓದಿಗಿಂತಲೂ
ಬುದ್ಧಿಶಕ್ತಿಯನ್ನು ಹೆಚ್ಚಾಗಿ ಗಳಿಸಿಕೊಂಡಿದ್ದರು.ಸಿದ್ಧಣ್ಣಯ್ಯನವರು ಬೆಳವಣಿಗೆಯಾಗುತ್ತ ಮಾನವೀಯತೆ,ಶಿಕ್ಷಣದ ಮೌಲ್ಯಗಳನ್ನು ಅರಿತುಕೊಂಡರು. ಈ ಫಲವಾಗಿ ಬಾಳುಪೇಟೆಯಲ್ಲಿ ತಮ್ಮ ಗುರುಪ್ಪಗೌಡರು ಉಚಿತವಾಗಿ ದಾನ ಮಾಡಿದ ಸ್ಥಳದಲ್ಲಿ ಸಿದ್ದಣ್ಣಯ್ಯ
ಪ್ರೌಢಶಾಲೆಯೊಂದನ್ನು ಕಟ್ಟಿಸಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನದ ಅನುಕೂಲ ಮಾಡಿಕೊಟ್ಟರು.ಇದಲ್ಲದೆ ಬಾಳುಪೇಟೆಯಲ್ಲಿ ಈಶ್ವರ ದೇವಾಲಯದ ನಿರ್ಮಾಣ, ಸ್ಥಳೀಯ ಆಸ್ಪತ್ರೆಗೆ ದಾನ ಮಾಡುತ್ತ ಸಜ್ಜನರಾಗಿ ಶರಣ ಸಂಸ್ಕೃತಿಯಲ್ಲಿ ಬೆಳೆಯುತ್ತ ಬಂದರು.ಎಲ್ಲದಕ್ಕಿಂತಲೂ ಮಿಗಿಲಾಗಿ ಸಿದ್ಧಣ್ಣಯ್ಯನವರು ಸಕಲೇಶಪುರ ತಾಲ್ಲೂಕಿನ ಕಾಫಿ ಕ್ಷೇತ್ರದಲ್ಲಿ ಮಾದರಿ ಎಂಬಂತೆ ತೋಟಗಾರಿಕೆಯನ್ನು ಮಾಡುತ್ತ, ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕಾಫಿಯನ್ನು ವಿಫುಲವಾಗಿ ಬೆಳೆಯುತ್ತಿರುವುದನ್ನು
ಕಂಡ ಇತರರು ಇವರನ್ನೇ ಅನುಸರಿಸಿದರು. ಪಲ್ಪರಿಂಗ್, ಸ್ಪಿಂಕ್ಲಿಂಗ್ ಮಾಡುವ ಯಂತ್ರಗಳನ್ನು ಪರಿಚಯಿಸಿದ್ದಲ್ಲದೇ ರಸಗೊಬ್ಬರವನ್ನು ತೋಟಕ್ಕೆ ಹಾಕಿ ವೈಜ್ಞಾನಿಕ
ಕೃಷಿ ಪದ್ಧತಿಯ ಮಾರ್ಗದರ್ಶಿಯಾದರೆಂದೇ ಹೇಳಬಹುದು. ಪ್ಲಾಂಟರ್ ಕಾಫಿ ಕ್ಯೂರಿಂಗ್ ಸಂಸ್ಥೆ ಸ್ಥಾಪಿಸುವಲ್ಲಿಯೂ ಸಹ ಪ್ರೇರೇಪಕರಾಗಿದ್ದರು. ಸಿದ್ದಣ್ಣಯ್ಯ ಪ್ರೌಢಶಾಲೆಯ ಅಧ್ಯಕ್ಷರಾಗಿ, ಹಾಸನ ಇಂಜನಿಯರಿಂಗ್ ಕಾಲೇಜಿನ ಸದಸ್ಯರಾಗಿ ಗುರುತರವಾದ ಸೇವೆ ಸಲ್ಲಿಸಿದ ಇವರು, ದಿನಾಂಕ 1980ರಲ್ಲಿ ಲಿಂಗೈಕ್ಯವಾದರು.
*ಚಿರಸ್ಮರಣಿಯ ವ್ಯಕ್ತಿ ಶ್ರೀ. ಬಿ.ಜಿ. ಗುರಪ್ಪನವರು.*
ಬಾಳುಪೇಟೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಸಾರ್ವಜನಿಕ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡ ಗುರಪ್ಪಗೌಡರು ರಾಜಕೀಯ ಧುರೀಣರೂ ಆಗಿದ್ದರು. 1957ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಇವರು ಹೂವಿನ ಗುರುತಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಿಲ್ಲೆಯ ಮಾಜಿ ಶಾಸಕರಾದ ಬೋರಣ್ಣಗೌಡರ ವಿರುದ್ಧ ಆಲೂರು ಬೇಲೂರು ಸಕಲೇಶಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ 378 ಮತಗಳ ಅಂತರದಲ್ಲಿ ಪರಾಭವಗೊಂಡರು.1960ರಲ್ಲಿ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
1965ರಲ್ಲಿ ಮಲ್ನಾಡ್ ಎಜುಕೇಶನ್ ಸೊಸೈಟಿ ಎಂಬ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿ ಇದರ ಅಡಿಯಲ್ಲಿ ಬರುವ ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜ್, ಶ್ರೀಮತಿ ಎವಿಕೆ ಮಹಿಳಾ ಕಾಲೇಜು, ಕೃಷ್ಣ ಲಾ ಕಾಲೇಜು ಇವುಗಳ ಹುಟ್ಟಿಗೆ ಕಾರಣರಾಗಿ ಈ ವಿದ್ಯಾ ಸಂಸ್ಥೆಗಳಲ್ಲಿ 27 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಪರವಾಗಿ ಶೈಕ್ಷಣಿಕವಾಗಿ ಸೈ ಎನಿಸಿಕೊಂಡರು. ಮತ್ತೆ 1967 ಸಕಲೇಶಪುರ ಆಲೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಆಲೂರಿನ ಚಿಕ್ಕೆಗೌಡರ ವಿರುದ್ಧ 2020 ಮತಗಳ ಅಂತರದಿಂದ ಸೋಲು ಅನುಭವಿಸಿದರು.ಸ್ವಚ್ಛ ರಾಜಕಾರಣಿಯಾಗಿದ್ದು ಹಲವಾರು ರಾಜ್ಯ ನಾಯಕರುಗಳೊಂದಿಗೆ ಸಂಪರ್ಕ ವಿಟ್ಟುಕೊಂಡಿದ್ದರು. ಹಾಸನದ ಮಲ್ನಾಡ್ ಇಂಜನೀಯರಿಂಗ್ ಕಾಲೇಜಿನ ಸ್ಥಾಪಕ ಅಧ್ಯಕ್ಷರಾಗಿ, ಅನೇಕ ಸಮಾಜಮುಖಿ ಸೇವೆಗಳನ್ನು ಮಾಡಿದರು. ಊರಿನ ಸುತ್ತಮುತ್ತಲಿನ ಕ್ಷೇತ್ರಗಳಿಗೆ ದೇವಸ್ಥಾನ, ಅಂಗನವಾಡಿ, ಶಾಲೆ, ಆಸ್ಪತ್ರೆಗಳಿಗೆ ಕೊಡುಗೈ ದಾನಿಯಾಗಿ ಸಹಾಯ ಮಾಡಿದ್ದಾರೆ. ಇವರ ಸೇವೆ ಮತ್ತು ವ್ಯಕ್ತಿತ್ವದ ನೆನಪಿಗಾಗಿ ಬಾಳ್ಳುಪೇಟೆ ವೃತ್ತಕ್ಕೆ ಇವರ ಹೆಸರನ್ನಿಡಲಾಗಿದೆ. ಸಾರ್ವಜನಿಕ ಸೇವ ಕಾರ್ಯಗಳಲ್ಲಿ ಧುಮುಕಿದವರು ರಾಜಕೀಯ ಸೇವೆ ಮಾಡುತ್ತಲೇ ಜಾತ್ಯಾತೀತವಾಗಿ ಬದುಕಿದರಲ್ಲದೆ ದೀನ ದಲಿತರ ಸೇವೆ ಮಾಡುತ್ತಾ 1980 ರಲ್ಲಿ ದಿವಂಗತರಾದರು.
ಯಡೇಹಳ್ಳಿ”ಆರ್”ಮಂಜುನಾಥ್.
ಹಿರಿಯ ವಿದ್ಯಾರ್ಥಿ ಬಿ.ಸಿದ್ದಣ್ಣಯ್ಯ ಪ್ರೌಢಶಾಲೆ.
(9901606220)