ಸಕಲೇಶಪುರ : ಮಕ್ನ ಕಾಡಾನೆಯ ಆಟಟೋಟಕ್ಕೆ ಬೇಸತ್ತ ಜನತೆ : ಕಾಡಾನೆಯನ್ನು ಸೆರೆಹಿಡಿಯುವಂತೆ ತಾಲೂಕಿನ ಜನರ ಒತ್ತಾಯ
ಹಗಲು ವೇಳೆ ಯಾರಿಗೂ ಕಾಣಿಸಿಕೊಳ್ಳದ ಮಕ್ನ, ರಾತ್ರಿ ವೇಳೆ ಮಾತ್ರ ಮನೆಗಳ ಮೇಲೆ ದಾಳಿಗೆ ಮುಂದಾಗುವ ವಿಶಿಷ್ಟ ಕಾಡಾನೆ.
ಸಕಲೇಶಪುರ : ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ಹಲವು ಭಾಗಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ (ಮಕ್ನ) ಅಂತೂ ಇಂತೂ ಅರಣ್ಯ ಇಲಾಖೆ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲಗಳಲೆ ಗ್ರಾಮದ ಕಾಫಿ ತೋಟ ಒಂದರಲ್ಲಿ ಈ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು.
ಸೆರೆ ಹಿಡಿಯುವ ಸಂದರ್ಭದಲ್ಲಿಯೂ ಕೂಡ ಸಾಕಾನೆಗಳ ಜೊತೆ ಈ ಮಕ್ನ ವೀರಾವೇಶದಿಂದ ಕಾಳಗಕ್ಕೆ ಮುಂದಾಗಿತ್ತು ಆದರೂ ಬಲಿಷ್ಟವಾಗಿದ್ದ ಸಾಕಾನೆಗಳು ಈ ಕಾಡಾನೆಯ ಸೊಕ್ಕು ಅಡಗಿಸುವಲ್ಲಿ ಯಶಸ್ವಿಯಾಗಿ ದೂರದ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ಕಾಡಾನೆಯನ್ನು ಬಿಟ್ಟಿತ್ತು. ಆದರೂ ಸಹ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಬಿಟ್ಟು ಬಂದಿದ್ದ ಅರಣ್ಯ ಪ್ರದೇಶವನ್ನು ಒಗ್ಗದ ಈ ಆನೆ ಪುನ: ಮಲೆನಾಡು ಪ್ರದೇಶ ತಾನು ಈ ಹಿಂದೆ ಇದ್ದಂತಹ ಸಕಲೇಶಪುರ ಭಾಗಕ್ಕೆ ಹಿಂತಿರುಗಿದೆ. ಈ ಆನೆ ಸೆರೆ ಹಿಡಿಯುವ ವೇಳೆ ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಈ ಕಾಡಾನೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಸಿಗಲು ಸಹಕಾರಿ ಯಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ಮಕ್ನ ಆನೆಯು ರಾತ್ರಿ ವೇಳೆ ಮನೆಗಳ ಕಿಟಕಿಯ ಗಾಜುಗಳನ್ನು ಹೊಡೆದು ಹಾಕುವುದು, ಮನೆಯ ಮುಂಭಾಗದ ಶೀಟ್ ಗಳನ್ನು ಮುರಿದು ಹಾಕುವುದು ಹೀಗೆ ಹತ್ತು ಹಲವು ರೀತಿಗಳಲ್ಲಿ ತನ್ನ ಪುಂಡಾಟವನ್ನ ನಡೆಸುತ್ತಲೇ ಬರುತ್ತಿದೆ.
ಕಳೆದ ರಾತ್ರಿ ಕೂಡ ಬಾಳ್ಳುಪೇಟೆ ಸಮೀಪದ ಮೆಣಸಮಕ್ಕಿ ಗ್ರಾಮದ ಪರಮೇಶ್ ಎಂಬುವರ ಮನೆಯ ಕಿಟಕಿ ಗಾಜುಗಳನ್ನು ಹಾಗೂ ಶೀಟ್ ಗಳನ್ನು ಮುರಿದು ಹಾಕಿದೆ, ಕಳೆದ ಎರಡು ದಿನಗಳಿಂದ ಬಾಳ್ಳುಪೇಟೆ ಸಮೀಪವೇ ವಾಸ್ತವ ಹೂಡಿರುವ ಈ ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮತ್ತೆ ಮಲೆನಾಡು ಭಾಗಕ್ಕೆ ಬಾರದಂತೆ ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.