ಸಕಲೇಶಪುರ : ಹಾರ್ಲೆ ಕೂಡಿಗೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿ – ಕರವೇ ಸ್ವಾಭಿಮಾನಿ ಸೇನೆಯಿಂದ ಪಿಡಿಒ ಗೆ ಮನವಿ.
ಕಾಫಿ ಬೀಜವನ್ನು ಒಣಗಿಸಲು ಆಟದ ಮೈದಾನ ಬಳಕೆ ವಿರುದ್ಧ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರ ಆಕ್ರೋಶ.
ಸಕಲೇಶಪುರ :- ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ ಗ್ರಾಮದಲ್ಲಿರುವ ಏಕೈಕ ಆಟದ ಮೈದಾನಕ್ಕೆ ಕೆಲವರು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಗಾಣದಹೊಳೆ ಘಟಕದ ವತಿಯಿಂದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಗಿರೀಶ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಗ್ರಾಮದ ಎಲ್ಲಾ ಯುವಕರು, ಮಕ್ಕಳು ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಇರುವ ಆಟದ ಮೈದಾನಕ್ಕೆ ಕೆಲ ದಿನಗಳಿಂದ ಕಾಫಿ ಬೀಜಗಳನ್ನು ಒಣಗಿಸಲು ಮೈದಾನವನ್ನು ಬಳಸಿಕೊಂಡಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ತೊಡಕಾಗಿದೆ ಎಂದು ರಕ್ಷಣಾ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.
ವರ್ಷದ ನಾಲ್ಕು ತಿಂಗಳು ಮಾತ್ರ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಾಗುತ್ತದೆ ಉಳಿದಂತೆ ಮಳೆಗಾಲ ಪ್ರದೇಶದಲ್ಲಿ ಕ್ರೀಡಾಂಗಣ ಬಳಕೆಯಾಗುವುದಿಲ್ಲ ಇಂಥ ಸಂದರ್ಭದಲ್ಲಿ ಕೂಡ ಕೆಲವರು ಕಾಫಿ ಬೀಜಗಳನ್ನು ಒಣಗಿಸಲು ಆಟದ ಮೈದಾನವನ್ನು ಬಳಸಿಕೊಂಡಿರುವುದು ಗ್ರಾಮದ ಯುವಕರಿಗೆ ಕ್ರೀಡಾ ಚಟುವಟಿಕೆ ನಡೆಸಲು ಅನಾನುಕೂಲವಾಗಿದೆ ಆದ್ದರಿಂದ ಸಂಬಂಧಪಟ್ಟವರು ಕೂಡಲೆ ಆಟದ ಮೈದಾನವನ್ನು ಕ್ರೀಡೆಗಳಿಗೆ ಮಾತ್ರ ಮುಕ್ತಗೊಳಿಸಬೇಕೆಂದು ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಪಂಚಾಯತಿಯ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.