ಸಕಲೇಶಪುರ : ಕಾಡಾನೆಗೆ ಗುಂಡು ಹೊಡೆಯುತ್ತೇನೆ ಎಂಬ ಹೇಳಿಕೆ ನೀಡಿದ್ದ ವಿಶ್ವನಾಥ್ ಪರ ನಿಂತ ಬಾಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಯಶಂಕರ್.
ರೈತರು ತಮ್ಮ ಕೃಷಿ ಹಾಗೂ ಬದುಕನ್ನು ಆನೆಗಳಿಂದ ರಕ್ಷಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿದ್ದು, ಇಲಾಖೆಗಳು, ಪ್ರಾಣಿ ಸಂರಕ್ಷಣೆ ಹೆಸರಿನ ಸಂಘಟನೆಗಳು ರೈತರ ಮೇಲೆ ಕಾನೂನು ಕಟ್ಟು ನಿಟ್ಟು ಹೇರುವುದು ಸರಿ ಅಲ್ಲ ಎಂದು ಬಾಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜೈ ಶಂಕರ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದೆ. ಈ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ಪರಿಹಾರ ಮಾಡಬೇಕಾದ ಸರಕಾರಗಳು ಈ ವಿಚಾರದಲ್ಲಿ ಜಾಣತನ ಮಾಡುತ್ತಿವೆ. ರೈತರು ದೇಶದ ಬೆನ್ನೆಲುಬು. ಅವರ ಸಮಸ್ಯೆ ವಿಚಾರದಲ್ಲಿ ಸರಕಾರ ಆಲಸ್ಯ ತೋರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗೆ ಬಾಗೆ ಗ್ರಾಮ ಪಂಚಾಯತ್ ನಲ್ಲಿ ಆನೆ ವಿಚಾರದಲ್ಲಿ ಅರಣ್ಯ ಇಲಾಖೆ ಸಭೆ ನಡೆಸಿದಾಗ ಮಾಜಿ ಶಾಸಕ ವಿಶ್ವನಾಥ್ ರವರು ರೈತರ ಪರ ಮಾತನಾಡಿದ್ದಾರೆ. ರೈತರ ಸಮಸ್ಯೆಯನ್ನು ಮನ ಮುಟ್ಟುವಂತೆ ಬಿಂಬಿಸಿದ್ದಾರೆ.
ಅವರ ಭಾವೋದ್ವೇಗದ ಮಾತುಗಳನ್ನೇ ಅಪಾರ್ಥವಾಗಿ ಕಲ್ಪಿಸಿದ ಮೇನಕಾ ಗಾಂಧಿಯವರು ವಿಶ್ವನಾಥ್ ರವರ ಬಂದೂಕು ಹಿಂಪಡೆಯಲು ತಿಳಿಸಿ, ಕೇಸು ದಾಖಲು ಮಾಡಿರುವುದು ಸರಿ ಅಲ್ಲ.
ಪ್ರತಿ ರೈತ ಕೂಡ ದೇಶದ ಮಹಾನ್ ಪುರುಷ. ಇಂತಹ ರೈತರ ಪರವಾಗಿ ಮಾತನಾಡುವವರನ್ನು ದಮನ ಮಾಡುವ ವಿಚಾರವನ್ನು ಖಂಡಿಸುವೆ . ಈ ವಿಚಾರದಲ್ಲಿ ಕಾಫಿ ಬೆಳೆಗಾರರು ವಿಶ್ವನಾಥ್ ಪರ ದನಿ ಎತ್ತಬೇಕು ವಿಶ್ವನಾಥ್ ರ ಕುಟುಂಬ ರಕ್ಷಣೆಗೆ ನಾವೆಲ್ಲರೂ ಒಗ್ಗೂಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ