ಸಕಲೇಶಪುರ : ದಲಿತರ, ಒಕ್ಕಲಿಗ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಎಸ್ ಸಿ, ಎಸ್ ಟಿ ವಿಭಾಗ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಶಾಸಕ ಮುನಿರತ್ನ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಒಕ್ಕಲಿಗರ ಬಗ್ಗೆ ಆವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸಮಾಜವೇ ತಲೆತಗ್ಗಿಸುವ ಹೀನ ಕೃತ್ಯವಾಗಿದೆ ಎಂದರು.
ಮುನಿರತ್ನ ಮಾತನಾಡಿರುವ ಅಸಂವಿಧಾನಿಕ ಪದಗಳು ಬಿಜೆಪಿಯವರ ಮನಸ್ಥಿತಿಯ ಪ್ರತಿಬಿಂಬ ವಾಗಿದೆ. ದಲಿತರ ಹಾಗೂ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಇದಾಗಿದೆ. ಶಾಸಕ ಮುನಿರತ್ನ ಶಾಸಕ ಸದಸ್ಯತ್ವ ರದ್ದುಮಾಡಬೇಕು, ಗಡಿಪಾರು ಮಾಡಬೇಕು, ಇಂತಹ ನೀಚರಿಂದ ಇಡೀ ರಾಜಕೀಯ ವ್ಯವಸ್ಥೆಗೆ ಕಳಂಕ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಾತ್ಮಕ ಸ್ಥಾನ ಅಲಂಕರಿಸಿರುವ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಪ್ರಾಣ ಬೆದರಿಕೆ ಹಾಕಿರುವ ಮುನಿರತ್ನ ತನ್ನ ಸ್ನಾನದಲ್ಲಿ ಮುಂದುವರೆಯಲು ಅನರ್ಹ . ವಿವಿಧ ಸಮುದಾಯಗಳ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಈತ ರೌಡಿಗಳ ನಂಟನ್ನು ಹೊಂದಿದ್ದಾನೆ ಎಂದು ಹೇಳಿದರು.
ಮುನಿರತ್ನರವರ ಶಾಸಕ ಸ್ಥಾನ ವಜಾ ಗೊಳಿಸಬೇಕು, ನ್ಯಾಯಾಲಯವು ಈತನಿಗೆ ಜಾಮೀನು ನೀಡದೆ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷ ಕಲ್ಗನೆ ಪ್ರಶಾಂತ್, ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಅನ್ನಪೂರ್ಣ, ಪಕ್ಷದ ಮುಖಂಡರಾದ ಬೈಕೆರೆ ದೇವರಾಜ್ ವಿಜಯ್ ಕುಮಾರ್ ಬ್ಯಾಕರವಳ್ಳಿ ಗೊದ್ದು ಲೋಕೇಶ್, ಹಸೀನಾ ಬಲ್ಕಿ ಶ್ರೇಣಿ, ಕೌಶಲ್ಯ ಲಕ್ಷ್ಮಣಗೌಡ ಪುರಸಭಾ ಸದಸ್ಯ ಅಣ್ಣಪ್ಪ ಇನ್ನಿತರರು ಇದ್ದರು