ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ : ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ಶಿಕ್ಷಣದಿಂದ ಮಾತ್ರ ಯಾವುದೆ ಸಮಾಜ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲವಾಗಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಮೇಲಳ್ಳಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಆದಿ ದ್ರಾವಿಡ ತುಳು ಸಮಾಜ ಸೇವಾ ಸಂಘದ ಹಾರ್ಲೇ ಕೂಡಿಗೆ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ ತಾಲೂಕಿನಲ್ಲಿ ನೂರಾರು ವರ್ಷಗಳಿಂದ ವಾಸಮಾಡುತ್ತಿರುವ ತುಳು ಮಾತನಾಡುವ ಆದಿ ದ್ರಾವಿಡ ಸಮುದಾಯ ಬೇರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತುಂಬಾ ಹಿಂದೆ ಉಳಿದಿದೆ. ಈ ನಿಟ್ಟಿನಲ್ಲಿ ಆದಿ ದ್ರಾವಿಡ ತುಳು ಸಮಾಜದವರು ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮೇಲೆ ಬರಲು ನಾನು ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ಆದಿ ದ್ರಾವಿಡ ತುಳು ಸಮಾಜದವರು ತಮ್ಮ ಮಕ್ಕಳಿಗೆ ಮೊದಲಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ . ನಾನು ಶಾಸಕನಾಗಿ ಆದಿ ದ್ರಾವಿಡ ಸಮಾಜಕ್ಕೆ ಎಲ್ಲಾ ರೀತಿಯ ನೆರವು ನೀಡಲು ಮುಂದಾಗುತ್ತೇನೆ ಹಾಗೂ ಸಮುದಾಯಕ್ಕೆ ಹೆಚ್ಚಿನ ನೆರವನ್ನು ನೀಡುವಂತೆ ಸರ್ಕಾರದ ಗಮನವನ್ನು ಸಹ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದರು.
ಕರ್ನಾಟಕ ರಾಜ್ಯ ಆದಿದ್ರಾವಿಡ ತುಳು ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ್ ಬಲ್ಲಾಳ್‌ಬಾಗ್ ಮಾತನಾಡಿ ಆದಿದ್ರಾವಿಡ ತುಳು ಸಮಾಜ ಸಮಾಜದ ದುರ್ಬಲ ವರ್ಗಗಳಲ್ಲಿ ಒಂದಾಗಿದೆ. ಸಮಾಜದ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಶೈಕ್ಷಣಿಕ, ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿ ಸಹ ತುಂಬಾ ಹಿಂದುಳಿದಿದೆ. ಬಹುತೇಕರು ಸ್ವಂತ ಸೂರನ್ನು ಹೊಂದಲು ವಿಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು ಇತ್ತ ಗಮನವರಿಸಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆದಿದ್ರಾವಿಡ ತುಳು ಸಮಾಜದ ನಿವೇಶನರಹಿತರಿಗೆ ನಿವೇಶನ ನೀಡಲು ಮುಂದಾಗಬೇಕಾಗಿದೆ. ಆದಿ ದ್ರಾವಿಡ ತುಳು ಸಮಾಜದ ಏಳಿಗೆಗಾಗಿ ನಾವೆಲ್ಲಾ ಒಂದೂಗೂಡಿ ಒಗ್ಗಟ್ಟಿನಿಂದ ಶ್ರಮ ಹಾಕಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಂಘಟನೆಯ ರಾಜ್ಯಗೌರವ ಅಧ್ಯಕ್ಷ ಸೀನಾ ಮೂಡುಬಿದ್ರೆ, ರಾಜ್ಯ ಉಪಾಧ್ಯಕ್ಷ ಧರ್ಮ ಬೆಳಗೋಡು, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಉಲ್ಲಾಳ, ಸಂಘಟನೆಯ ಹಾಸನ ಜಿಲ್ಲಾಧ್ಯಕ್ಷ ರವಿನಾರಾಯಣ, ತಾಲೂಕು ಗೌರವ ಅಧ್ಯಕ್ಷ ಬೋರಾಣ್ಣ, ತಾಲೂಕು ಅಧ್ಯಕ್ಷ ರಮೇಶ್ ಬೆಳಗೋಡು, ತಾಲೂಕು ಉಪಾಧ್ಯಕ್ಷ ಶಿವಕುಮಾರ್ ಕುಂಬರಡಿ, ಪ್ರಧಾನ ಕಾರ್ಯದರ್ಶಿ ಸುನೀಲ್ , ಇನ್ನಿತರರು ಹಾಜರಿದ್ದರು.