ಸಕಲೇಶಪುರ: ಪಶ್ಚಿಮಘಟ್ಟದ ನಿಸರ್ಗದ ಸೊಬಗಿನಲ್ಲಿ ಇರುವ ನಮ್ಮ ಸಕಲೇಶಪುರ ತಾಲ್ಲೂಕು ಒಂದು ಸುಂದರ ಪ್ರವಾಸಿ ತಾಣವಾಗಿದೆ.
ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಪ್ರವಾಸಿಗರ ಮೂಲ ಸೌಲಭ್ಯಗಳಲ್ಲಿ ಟ್ಯಾಕ್ಸಿ ಸೌಲಭ್ಯ ಬಹಳ ಮುಖ್ಯವಾದುದ್ದು. ಸಕಲೇಶಪುರ, ಹಾನುಬಾಳು, ಹೆತ್ತೂರು, ವಣಗೂರು ಈ ಭಾಗದಲ್ಲಿ ಬಾಡಿಗೆ ಆಟೋಗಳು, ಕಾರುಗಳು, ಜೀಪುಗಳ ಸೌಲಭ್ಯವಿದೆ. ಆದರೆ ಪ್ರತಿಯೊಂದು ಪ್ರವಾಸಿ ಸ್ಥಳಗಳಿಗೆ ತಾಲ್ಲೂಕು ಕೇಂದ್ರ ಸೇರಿದಂತೆ ಇತರ ಪ್ರದೇಶಗಳಿಂದ ನಿಗದಿತವಾದ ಬಾಡಿಗೆ ದರ ನಿಗದಿ ಆಗಿಲ್ಲ. ಕೆಲವು ವಾಹನಗಳ ಮಾಲೀಕರು, ಚಾಲಕರು ಹೆಚ್ಚು ಬಾಡಿಗೆ ಪಡೆದರೆ, ಇನ್ನು ಕೆಲವರು ಕನಿಷ್ಟ ಬಾಡಿಗೆ ಪಡೆಯುತ್ತಿದ್ದಾರೆ. ಇದರಿಂದ ಪ್ರವಾಸಿಗರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಇದರ ಪರಿಣಾಮ ಏನಾಗಿದೆ ಎಂದರೆ ದೂರದ ಊರುಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿಯೇ ಬಂದು ಹೋಗುತ್ತಾರೆ. ಇಲ್ಲವೆ ಸ್ಥಳೀಯ ಸ್ನೇಹಿತರ ಫೋರ್ ವ್ಹೀಲ್ ಜೀಪುಗಳನ್ನು ತೆಗೆದುಕೊಂಡು ಹೋಗುವುದು, ಕೆಲವು ಹೋಂ ಸ್ಟೇ ಹಾಗೂ ರೆಸಾರ್ಟ್ ನವರ ವಾಹನಗಳನ್ನೇ ಅವಲಂಭಿಸುವುದು ಆಗುತ್ತಿದೆ.
ಹಾಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವಾಹನ ಖರೀದಿ ಮಾಡಿ ಬಾಡಿಗೆ ಮಾಡುವ ಎಷ್ಟೋ ಜನರಿಗೆ ವಾರದಲ್ಲಿ ನಾಲ್ಕು ಬಾಡಿಗೆ ಕೂಡ ದೊರೆಯದ ಸ್ಥಿತಿ ನಿರ್ಮಾಣ ಆಗಿದೆ. ನಮ್ಮ ಉದ್ದೇಶ ಇಷ್ಟೇ ಪ್ರವಾಸಿಗರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರಬೇಕಾದವರು, ಟ್ಯಾಕ್ಸಿಯವರು. ನಮ್ಮೂರಿಗೆ ಹೊರ ಊರಿನಿಂದ ಯಾರೇ ಬರಲಿ ಅವರು ಮೊದಲು ಮಾಹಿತಿಯನ್ನು ಕೇಳುವುದೇ ಟ್ಯಾಕ್ಸಿಯವರನ್ನು. ಹೀಗಾಗಿ ನಮ್ಮಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ.
- ಪ್ರವಾಸಿ ತಾಣಗಳಿಗೆ ದರ ನಿಗದಿ ಆಗಬೇಕು.
- ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡುವುದು, ಅವರಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡುವುದು, ಸಹಾಯ ಮಾಡುವುದು. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡದೆ, ಸೇವಾ ಮನೋಭಾವದಲ್ಲಿ ವ್ಯವಹರಿಸುವುದು ಅಗತ್ಯವಾಗಿದೆ.
- ನಮ್ಮ ಊರನ್ನು ನಾವು ಸುಂದರ, ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ನೀವು ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ಬದಿಯಲ್ಲಿ ನಿಂತು ವಾಹನಗಳ ಮೇಲೆ ಮದ್ಯದ ಬಾಟಲ್, ಲೋಟಗಳನ್ನು ಇಟ್ಟುಕೊಂಡು ಮದ್ಯಸೇವನೆ ಮಾಡುತ್ತಿದ್ದರೆ ತಿಳುವಳಿಕೆ ಹೇಳುವುದು, ಇಲ್ಲವೆ ಅಂತಹ ದೃಶ್ಯಗಳನ್ನು ಮೊಬೈಲ್ ಪೋನ್‌ನಲ್ಲಿ ಸೆರೆಯಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವುದು. ನಿಮ್ಮ ವಾಹನಗಳಲ್ಲಿ ಪ್ರಯಾಣ ಮಾಡುವವರು ಅಂತಹ ಕೆಲಸ ಮಾಡಲು ಮುಂದಾದರೆ ಸೌಜನ್ಯದಿಂದಲೇ ಅವರಿಗೆ ತಿಳುವಳಿಕೆ ಹೇಳುವುದು.
- ತಮ್ಮ ತಮ್ಮ ವಾಹನಗಳಲ್ಲಿ ಸಕಲೇಶಪುರ ಪ್ರವಾಸಿ ತಾಣಗಳ ಪರಿಚಯದ ಚಾಟ್‌ಗಳನ್ನು ಇಟ್ಟುಕೊಳ್ಳುವುದು.
- ಪ್ರವಾಸಿಗರ ವಾಹನಗಳ ಮಾರ್ಗದ ಮದ್ಯದಲ್ಲಿ ಕೆಟ್ಟು ನಿಂತಿದ್ದರೆ ಸಹಾಯ ಮಾಡುವುದು.
- ಪ್ರತಿಯೊಬ್ಬ ಪ್ರಯಾಣಿಕರೊಂದಿಗೆ ಸ್ನೇಹ, ವಿಶ್ವಾಸ ಬೆಳೆಸಿಕೊಳ್ಳುವುದು. ಪ್ರವಾಸಿಗರ ಬಾಯಲ್ಲಿ ಸಕಲೇಶಪುರದ ಟ್ಯಾಕ್ಸಿಯವರ ಬಗ್ಗೆ ಒಳ್ಳೆಯ ಮಾತು, ನಂಬಿಕೆ ಬೆಳೆದಾಗ, ಬೆಂಗಳೂರುನಿಂದ ಯಾರ್ ಕಷ್ಟಪಟ್ಟು ಡ್ರೈವಿಂಗ್ ಮಾಡಿಕೊಂಡು ಹೋಗೋದು, ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಹಾಗೂ ಬೆಂಗಳೂರು–ಮಂಗಳೂರು ರೈಲು ಮಾರ್ಗ ಸಕಲೇಶಪುರ ಮದ್ಯದಲ್ಲಿಯೇ ಹಾದು ಹೋಗಿದೆ. ಬಸ್ಸು ಇಲ್ಲವೇ ರೈಲಿನಲ್ಲಿ ಹೋದರೆ ಅಲ್ಲಿಂದ ರೆಸಾರ್ಟ್, ಹೋಂ ಸ್ಟೇ, ಪ್ರವಾಸಿ ತಾಣಗಳಿಗೆ ಟ್ಯಾಕ್ಸಿಯಲ್ಲಿಯೇ ಹೋಗಬಹುದು ಎಂಬುವ ಒಂದು ಮನಸ್ಥಿತಿಯ ಪರಿವರ್ತನೆ ಮಾಡುವುದು ತುಂಬಾ ಅಗತ್ಯವಾಗಿದೆ.
ಅಂತಹ ಒಂದು ವಾತಾವರಣ ನಿರ್ಮಾಣವಾದರೆ ಎಲ್ಲಾ ಬಾಡಿಗೆ ವಾಹನಗಳಿಗೆ ನಿರಂತರ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಆರ್ಥಿಕ ಅಭಿವೃದ್ಧಿ ಸಹ ಸಾಧ್ಯವಾಗುತ್ತದೆ. ಜೊತೆಗೆ ಸಕಲೇಶಪುರ ಪ್ರವಾಸೋಧ್ಯಮ ತುಂಬಾ ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದುವುದಕ್ಕೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಪಾತ್ರ ಕೂಡ ಪ್ರಮುಖವಾಗುತ್ತದೆ. ಆದ್ದರಿಂದ ಈ ಒಂದು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಸಹನಾ ಶಶಿಧರ್, ಅಧ್ಯಕ್ಷರು, ಜಾನೇಕೆರೆ ಆರ್. ಪರಮೇಶ್, ಕಾರ್ಯದರ್ಶಿ, ರೋಟರಿ ಸಂಸ್ಥೆ ಸೇರಿದಂತೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.