ಸಕಲೇಶಪುರ: ನೆಲಗಹಳ್ಳಿ ಗ್ರಾಮದಿಂದ ನೆಲಗಹಳ್ಳಿ ಕಾಲೋನಿಗೆ ಹೋಗಲು ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದು ಈ ಹಿನ್ನೆಲೆಯಲ್ಲಿ 650 ಮೀಟರ್ ಗಳಷ್ಟು ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಸರ್ಕಾರದ ಅನುದಾನ ದೊರಕಿದ್ದು ಆದರೆ ಅರಣ್ಯ ಇಲಾಖೆಯವರು ರಸ್ತೆ ನಿರ್ಮಾಣ ಮಾಡಲು ತಕರಾರು ಮಾಡುತ್ತಿದ್ದಾರೆ, ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬಿಜೆಪಿ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಜಾನೆಕೆರೆ ಲೋಕೇಶ್ ಹೇಳಿದರು.
ಪಟ್ಟಣದ ಮಿನಿವಿಧಾನಸೌದದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಶ್ವೇತಾರವರಿಗೆ ನೆಲಗಹಳ್ಳಿ ಕಾಲೋನಿ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ ನಂತರ ಮಾತನಾಡಿ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ನೆಲಗಹಳ್ಳಿ ಗ್ರಾಮದಿಂದ ನೆಲಗಹಳ್ಳಿ ಕಾಲೋನಿಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಸುಮಾರು 100 ವರ್ಷಗಳಿಂದ ಇದೇ ರಸ್ತೆಯನ್ನು ತಿರುಗಾಡಲು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಲಾಗುತ್ತಿದೆ. ಕಾಲೋನಿಯಲ್ಲಿ ಸುಮಾರು 70 ಕುಟುಂಬಗಳು ವಾಸವಿದ್ದು ನೆಲಗಹಳ್ಳಿ ಗ್ರಾಮಸ್ಥರು ಹಾಗೂ ಕಾಲೋನಿ ವಾಸಿಗಳ ತೋಟಗಳಿಗೆ ಹಾಗೂ ಗ್ರಾಮಸ್ಥರ ಮನೆಗಳಗೆ ಹೊಗಲು ಮತ್ತು ಗ್ರಾಮ ದೇವತೆಯ ದೇವಸ್ಥಾನಕ್ಕೆ ಇದೇ ರಸ್ತೆಯನ್ನು ಬಳಸಲಾಗುತ್ತಿದೆ. ಇದರ ಪರ್ಯಾಯವಾಗಿ ಯಾವುದೇ ರಸ್ತೆಗಳು ಈ ಕುಟುಂಬಗಳಗೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದ ಪರಿಣಾಮ ಗ್ರಾಮದಲ್ಲಿ ಸುಮಾರು 650 ಮೀಟರ್ ದೂರ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅವಕಾಶ ದೊರಕಿದ್ದು ಸುಮಾರು 47ಲಕ್ಷ ಅನುದಾನ ಸಹ ಮಂಜೂರಾಗಿದೆ. ಆದರೆ ಕಾಮಗಾರಿ ಆರಂಭಿಸುವಾಗ ಅರಣ್ಯ ಇಲಾಖೆಯವರು ಅವರಿಗೆ ಸೇರುವ ಜಾಗವೆಂದು ಕೆಲಸವನ್ನು ನಿಲ್ಲಿಸಿ, ಕಂದಾಯ ಇಲಾಖೆಯವರು ನಕ್ಷೆಯಲ್ಲಿ ರಸ್ತೆಯನ್ನು ತೋರಿಸಿದ್ದರೆ ರಸ್ತೆ ಕಾಮಗಾರಿಯನ್ನು ಮಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ. ಇದೀಗ ರಸ್ತೆ ಕಾಮಗಾರಿ ನಿಂತಿದ್ದು ಶಾಲೆಗೆ ಹೋಗುವ ಕಾಲೋನಿಯ ಮಕ್ಕಳು ಹಾಗೂ ವಯಸ್ಸಾದ ವೃದ್ಧರು ಆಸ್ಪತ್ರೆಗೆ ಹೋಗಲು ಹಾಗೂ ಮನೆಗೆ ಆಹಾರ ಸಾಮಗ್ರಿ ತರಲು ಈ ರಸ್ತೆಯು ಕೆಟ್ಟು ಹೋಗಿರುವುದರಿಂದ ಯಾವುದೇ ಬಾಡಿಗೆ ವಾಹನಗಳು ನೆಲಗಹಳ್ಳಿ ಕಾಲೋನಿ ರಸ್ತೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಬಂದರೂ ಸಹಾ ದುಪ್ಪಟ್ಟು ಹಣ ಕೇಳುತಿದ್ದಾರೆ ಹಾಗೆ ಕೃಷಿ ಚಟುವಟಿಕೆಗಳನ್ನು ಮಾಡಲೂ ಸಹ ಈ ರಸ್ತೆಯನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಬೆಳೆದಂತಹ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೆ ಕೆಟ್ಟು ಹೋಗಿ ಬದುಕಲು ಬೇರೆ ದಾರಿಯೇ ಇಲ್ಲದೆ ಕಷ್ಟಪಡುವ ಹಾಗೆ ಆಗಿದೆ. ಇದೇ ಪರಿಸ್ಥಿತಿಯಲ್ಲಿ ಹೊನ್ನಮ್ಮ ಎಂಬುವವರು ರಾತ್ರಿ ಸಮಯದಲ್ಲಿ ಆಸ್ಪತ್ರೆಗೆ ಹೋಗಲಾಗದೇ ಪ್ರಾಣವನ್ನು ಸಹಾ ಕಳೆದು ಕೊಂಡಿರುತ್ತಾರೆ. ಆದ್ದರಿಂದ ನೆಲಗಹಳ್ಳಿ ಕಾಲೋನಿಗೆ ಬರುವ ಈ ರಸ್ತೆಯಲ್ಲಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ವತಿಯಿಂದ ಅನುಮತಿ ಕೊಡಿಸಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಬಗೆಹರಿಯುವವರೆಗೂ ಮಿನಿವಿಧಾನಸೌದದ ಮುಂಭಾಗ ನಿರಂತರ ಸತ್ಯಾಗ್ರಹ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕು ರೈತಮೋರ್ಚಾ ಉಪಾಧ್ಯಕ್ಷ ಹೃಷಿಕೇಷ್ ಮಂದಾರ್, ಉದ್ಯಮಿ ಅಶೋಕ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿ