ಸಕಲೇಶಪುರ : ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮಾಯಣದ ಮೂಲಕ ರಾಜಧರ್ಮ, ನೀತಿಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು. 24ಸಾವಿರ ಶ್ಲೋಕಗಳನ್ನು ಒಳಗೊಂಡ ರಾಮಾಯಣ ಮಹಾಕಾವ್ಯ ಬರೆದು ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಹೊಳೆನರಸೀಪುರ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಅಶೋಕ್ ಮಾತನಾಡಿ, ಮಹರ್ಷಿ ವಾಲ್ಮೀಕಿಯ ಜೀವನದಲ್ಲಿ ನಡೆದ ಮಹತ್ವದ ತಿರುವು ಪಡೆದ ಘಟನೆಗಳನ್ನು ತಿಳಿಸಿರುವುದರ ಮೂಲಕ ಸತತ ಪರಿಶ್ರಮದಿಂದ ಭಗವಂತನ ಕರುಣೆ ಪಡೆದು ಶ್ರೀ ರಾಮಾಯಣ ಮಹಾಕಾವ್ಯವನ್ನು ರಚಿಸಿ ಭಾರತೀಯರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ತಿಳಿಸಿದರು . ಇದೇ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರ ಕವಿ ಕುವೆಂಪು ಹಳೆಗನ್ನಡ ಭಾಷೆಯಲ್ಲಿ 22,284 ಸಾಲುಗಳನ್ನು ಒಳಗೊಂಡ ಶ್ರೀರಾಮಾಯಣ ದರ್ಶನಂ ಕೃತಿ ರಚನೆ ಮಾಡಿ ಕನ್ನಡ ಭಾಷೆಯಲ್ಲಿ ಬರೆದರೂ ಎಂದು ಹೇಳಿದರು.
ರಾಮಾಯಣ ಮಹಾಕಾವ್ಯದಲ್ಲಿ ಭಾರತದ ಮಾದರಿ ಸಂಸ್ಕೃತಿ, ಸಂಸ್ಕಾರ, ರೀತಿ ನೀತಿ, ಆಚಾರ, ವಿಚಾರ, ಉಡುಗೆ ತೊಡಿಗೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಮಹಾನ್ ದರ್ಶನಿಕರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು, ಅವರಂತೆ ಬಾಳಲು ಪ್ರಯತ್ನ ಪಡಬೇಕು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಡಾಕ್ಟರ್ ಶೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಜ್ಯೋತಿ ರಾಜಕುಮಾರ್, ತಹಸೀಲ್ದಾರ್ ಮೇಘನಾ, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್, ಸಮಾಜ ಕಲ್ಯಾಣಇಲಾಖೆಯ ಮೋಹನ್ ಕುಮಾರ್, ಪುರಸಭಾ ಮುಖ್ಯ ಅಧಿಕಾರಿ ನಟರಾಜ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಆದಿತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು