ರಾಹುಲ್ ಗಾಂಧಿಯ ದಲಿತ ವಿರೋಧಿ ಹೇಳಿಕೆ ಖಂಡನೀಯ: ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು
ಸಕಲೇಶಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿದೇಶದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ರಾಹುಲ್ ಗಾಂಧಿ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತಾರೆ ಎಂದು ಅಪಪ್ರಚಾರ ಮಾಡಿದ ರಾಹುಲ್ ಗಾಂಧಿರವರು ಇದೀಗ ದಲಿತರ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ವಿದೇಶದಲ್ಲಿ ಮಾತನಾಡಿರುವುದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಇದಲ್ಲದೆ ವಿದೇಶಗಳಿಗೆ ಅವರು ಹೋದಾಗ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇದನ್ನು ಭಾರತೀಯ ಜನತಾ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಕೂಡಲೆ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ದಲಿತ ಮುಖಂಡ ಸ್ಟೀವನ್ ಪ್ರಕಾಶ್ ಮಾತನಾಡಿ ರಾಹುಲ್ ಗಾಂಧಿರವರ ಮೀಸಲಾತಿ ವಿರೋಧಿ ಹೇಳಿಕೆ ಕೇವಲ ಸಂವಿಧಾನ ವಿರೋಧಿ ಹೇಳಿಕೆ ಮಾತ್ರವಲ್ಲ ದಲಿತ ಸಮುದಾಯದ ವಿರೋಧಿ ಹೇಳಿಕೆಯಾಗಿದೆ. ಇಲ್ಲಿ ಜಾತ್ಯತೀತ್ಯತೆ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ವಿದೇಶದಲ್ಲಿ ಜಾತಿಯತೆ ಮಾಡುವುದು ಎಷ್ಟು ಸರಿ?ಒಟ್ಟಾರೆಯಾಗಿ ನಕಲಿ ಜಾತ್ಯಾತೀತ್ಯತೆ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ರಾಹುಲ್ ಗಾಂಧಿರವರನ್ನು ಕೂಡಲೆ ಸಂಸದ ಸ್ಥಾನದಿಂದ ವಜಾಗೊಳಿಸಲು ಮಾನ್ಯ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆ ಅಂಗವಾಗಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕೆಲ ನಿಮಿಷಗಳ ಕಾಲ ಮಾನವ ಸರಪಳಿ ಮಾಡಿ ರಾಹುಲ್ ಗಾಂಧಿ ವಿರುದ್ದ ಘೋಷಣೆಯಾಗಿ ರಾಹುಲ್ ಗಾಂಧಿ ಭಾವಚಿತ್ರವನ್ನು ದಹಿಸಿ ಆಕೊ್ರೀಷ ವ್ಯಕ್ತಪಡಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅಗ್ನಿ ಸೋಮಶೇಖರ್, ಬೊಮ್ಮನಕೆರೆ ಮಧು ,ಪುರಸಭಾ ಸದಸ್ಯರುಗಳಾದ ಪ್ರದೀಪ್, ವನಜಾಕ್ಷಿ, ರೇಖಾ ರುದ್ರಕುಮಾರ್, ಬಿಜೆಪಿ ಮುಖಂಡರುಗಳಾದ ರಾಜ್‌ಕುಮಾರ್,ನವೀನ್ ಶೆಟ್ಟಿ, ಬಾಳ್ಳು ಶಿವಕುಮಾರ್,ಶೇಖರ್ ಕಬ್ಬಿನಗದ್ದೆ, ಮುಂತಾದವರು ಹಾಜರಿದ್ದರು.