ಬೆಂಗಳೂರು : ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ 15 ಜಿಲ್ಲೆಗಳ ಮಹಿಳಾ ಘಟಕದ ಅಧ್ಯಕ್ಷರನ್ನು ತೆಗೆದು ಹಾಕಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯರವರು ಚುನಾವಣೆಯ ಮುಗಿಯುವ ತನಕ ಯಾವುದೇ ಅಧ್ಯಕ್ಷರನ್ನು ಬದಲಿಸದಂತೆ ಹೇಳಿದ್ದರು ಕೂಡ ಪುಷ್ಪ ಅಮರನಾಥ್ ಅವರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಗೌರವ ಕೊಡದೆ ಹಾಗೂ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರಿಗೂ ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ಜಿಲ್ಲಾಧ್ಯಕ್ಷರನ್ನು ವಜಾಗೊಳಿಸಿರುವುದು ಖಂಡನೀಯ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಸಮಾಜದಲ್ಲಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೊರಗು ಇರುವಾಗಲೇ ಮಹಿಳಾ ಘಟಕದ ರಾಜ್ಯಾಧ್ಯಕ್ಷರ ಈ ನಿರ್ಧಾರ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಪಕ್ಷಕ್ಕೋಸ್ಕರ ನಾವೆಲ್ಲರೂ ಹಗಲಿರಳು ಶ್ರಮಿಸಿದ್ದೇವೆ, ಆದರೂ ಪಕ್ಷದಲ್ಲಿ ಯಾವುದೇ ಗೌರವ ಸಿಗುತ್ತಿಲ್ಲ ಎಂದು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
ನಾವೇನಾದರೂ ಪ್ರಶ್ನೆ ಮಾಡಲು ಹೋದರೆ ನಮ್ಮ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಜಾತಿ ನಿಂದನೆ ಕೇಸ್ ದಾಖಲಿಸುತ್ತೇನೆ ಎಂದು ಹೆದರಿಸುತ್ತಾರೆ ಇಂಥ ಅಧ್ಯಕ್ಷರ ಜೊತೆ ನಾವು ಹೇಗೆ ಕೆಲಸ ಮಾಡುವುದು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಿಂದಿನ ಮಹಿಳಾ ಘಟಕದ ರಾಜ್ಯಾಧ್ಯಕ್ಷರುಗಳು ತುಂಬಾ ಅತ್ಯುತ್ತಮವಾಗಿ ಕೆಲಸ ಮಾಡಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರು . ಆದ್ದರಿಂದ ಈ ಬಗ್ಗೆ ಸಿದ್ದರಾಮಯ್ಯನವರು ಹಾಗೂ ಡಿ.ಕೆ ಶಿವಕುಮಾರ್ ರವರು ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ಪುಷ್ಪಾ ಅಮರ್ ನಾಥ್ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿಯಾಗಿದ್ದು ಕ್ಷೇತ್ರದಲ್ಲಿ ಕೆಲ ಕಾಲ ಹವಾ ಎಬ್ಬಿಸಿದ್ದರು.