ಸಕಲೇಶಪುರ: ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ದಿನಾಂಕ 11-03-2022ರಂದು ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಿದಾಗ, ಸದ್ಯಕ್ಕೆ ಮುಷ್ಕರ ಮಾಡುವುದು ಬೇಡ, 3 ತಿಂಗಳಲ್ಲಿ ಎಲ್ಲರಿಗೂ ಮಂಜೂರು ಮಾಡುತ್ತೇವೆ ಎಂದು ತಹಸೀಲ್ದಾರ್‌ರವರು, ಉಪವಿಭಾಗಾಧಿಕಾರಿಗಳು ಭರವಸೆ ನೀಡಿದ ಮೇರೆಗೆ ಸತ್ಯಾಗ್ರಹ ಸ್ಥಗಿತಗೊಳಸಲಾಗಿತ್ತು. ಆದರೆ ಇದುವರೆಗೂ ಒಬ್ಬರಿಗೂ ಭೂಮಿ ಮಂಜೂರು ಮಾಡಿಲ್ಲ. ಸಕಲೇಶಪುರ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಮಾಜಿ ಸೈನಿಕರಿಗೆ 1189 ಎಕರೆ ಜಮೀನನ್ನು ಮಂಜೂರು ಮಾಡುವುದಾಗಿ ಸರ್ಕಾರ ಮುಚ್ಚಳಕೆ ನೀಡಿದ ಮೇರೆಗೆ ಉಚ್ಛ ನ್ಯಾಯಾಲಯ ಆದೇಶ ನೀಡಿ 1 ವರ್ಷ ಕಳೆದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ದಿನಾಂಕ 07-05-2022ರಂದು 30 ವೀರಯೋದರ ಪತ್ನಿಯರಿಗೆ (ಮಹಿಳೆಯರಿಗೆ) ಜಿಲ್ಲಾಧಿಕಾರಿಗಳು ಭೂಮಿ ಮಂಜೂರು ಮಾಡಿದರು. ಅವರಿಗೆ ಮಂಜೂರಾದ ಭೂಮಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದ್ದು, ಭೂಮಿ ನೀಡಿಯೂ ಭೂಮಿ ಇಲ್ಲದಂತಾಗಿದೆ. ಅರಣ್ಯ ಇಲಾಖೆಯಿಂದ ಸರಿಯಾದ ಮಾಹಿತಿ ಪಡೆಯದೇ, ಚರ್ಚಿಸದೆ, ಅಣ್ಯ ಇಲಾಖೆಯಿಂದ ಉತ್ತರ ಬಂದಿಲ್ಲ ಎಂದು ನೆಪವೊಡ್ಡಿ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳುತ್ತಿಲ್ಲ, ಇದಕ್ಕಾಗಿಯೇ ಓರ್ವ ಭೂಮಾಪಕರನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದರು ಇದುವರೆಗೂ ಪಹಣಿಯಲ್ಲಿ ಕಾದಿರಿಸಿದ ಭೂಮಿಯ ಸರ್ವೆ ಕೆಲಸ ಮಾಡಿಸಿಲ್ಲ, ಜಿಲ್ಲಾಧಿಕಾರಿಗಳ ಆದೇಶ ಹಾಗೂ ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ. ಇದುವರೆಗೆ ಮಂಜೂರು ಮಾಡಿರುವ ಭೂಮಿ, ಅರಣ್ಯ ಇಲಾಖೆಯ ಭೂಮಿ ಆಗಿರುವುದರಿಂದ, ಬದಲಿ ಭೂಮಿ ಮಂಜೂರು ಆಗಬೇಕು ಹಾಗೂ 189 ಎಕರೆ ಪ್ರದೇಶ ಕೊಡುವುದಾಗಿ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದಂತೆ ತಾಲ್ಲೂಕು ಹಾಗೂ ಜಿಲ್ಲೆಯ ಮಾಜಿ ಸೈನಿಕರಿಗೆ ಮಂಜೂರು ಮಾಡಬೇಕು. ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ದಿನಾಂಕ 14-11-2022 ರಿಂದ ಮಾಜಿ ಸೈನಿಕರ ಸಂಘದ ವತಿಯಿಂದ ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಸತ್ಯಾಗ್ರಹ ನಡೆಸುವುದರ ಮೂಲಕ ಹೋರಾಟ ನಡೆಸಲಾಗುವುದು ಎಂದು ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ಉಪಾಧ್ಯಕ್ಷ ಟಿ.ಪಿ ಕೃಷ್ಣನ್ ಹೇಳಿಕೆ ನೀಡಿದ್ದಾರೆ.