ಅಕ್ಕನ ಮನೆಗೆ ಊಟಕ್ಕೆ ಬಂದ ತಮ್ಮ – ಚಿನ್ನದ ಸರ ಕದ್ದ ಪ್ರಕರಣದಲ್ಲಿ ಪೊಲೀಸರ ಶೀಘ್ರ ಕಾರ್ಯಾಚರಣೆ
ಸಕಲೇಶಪುರ, ಸೆ.17:ಪಿತೃಪಕ್ಷ ಹಬ್ಬದ ನಿಮಿತ್ತ ಅಕ್ಕನ ಮನೆಗೆ ಊಟಕ್ಕೆ ಬಂದ ತಮ್ಮನೇ ಅಕ್ಕನ ಚಿನ್ನದ ಸರ ಕದ್ದ ಘಟನೆ ಸಕಲೇಶಪುರದಲ್ಲಿ ಬೆಳಕಿಗೆ ಬಂದಿದೆ.
ನಗರದ ಚಂಪಕನಗರ ಬಡಾವಣೆಯ ಮಾನಸ ರವರು 15 ಸೆಪ್ಟೆಂಬರ್ ರಂದು ಪಿತೃಪಕ್ಷ ಹಬ್ಬದ ನಿಮಿತ್ತ ತಮ್ಮ ಜೀವನ್ ಹೆತ್ತೂರ್‌ರನ್ನು ಊಟಕ್ಕೆ ಕರೆಸಿಕೊಂಡಿದ್ದರು. ಊಟದ ವೇಳೆ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ 16 ಗ್ರಾಂ ತೂಕದ, ಸುಮಾರು 1.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಸರವನ್ನು ಜೀವನ್ ತಮ್ಮ ಸ್ನೇಹಿತ ಪ್ರಶಾಂತ್ ಹೆತ್ತೂರ್ ಸಹಕಾರದೊಂದಿಗೆ ಕದ್ದು, ಬೆಂಗಳೂರಿನ ಶಿವು ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ.
ಚಿನ್ನದ ಸರ ಕಾಣದೆ ಅಕ್ಕನಿಗೆ ಸಂಶಯವಾಗಿದ್ದರಿಂದ ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಅವರಿಗೆ ದೂರು ನೀಡಿದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಜೀವನ್ ಹಾಗೂ ಪ್ರಶಾಂತ್‌ರನ್ನು ವಿಚಾರಣೆ ನಡೆಸಿ ನಿಜವನ್ನು ಬಯಲು ಮಾಡಿಸಿದರು.
ದೂರು ಸ್ವೀಕರಿಸಿ ಕಾರ್ಯ ಪ್ರವೃತ್ತರಾದ ಪೊಲೀಸರು ಬೆಂಗಳೂರಿನ ಶಿವು ಅವರನ್ನು ಕರೆಸಿ ಕೇವಲ ಮೂರು ಗಂಟೆಗಳಲ್ಲೇ ಚಿನ್ನದ ಸರವನ್ನು ಠಾಣೆಗೆ ತಂದು ಮಾನಸ ರವರಿಗೆ ಹಿಂತಿರುಗಿಸಿದರು.
ಮಾನಸ ರವರ ಕುಟುಂಬದವರು ಪೊಲೀಸರ ಶೀಘ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ಧನ್ಯವಾದ ತಿಳಿಸಿದ್ದಾರೆ.