ಸಕಲೇಶಪುರ : ತಾಲೂಕಿನ ದಲಿತ ಸಂಘಟನೆಗಳಲ್ಲಿ ಕೆಲವರು ಒಡೆದಾಳುವ ನೀತಿ ಅನುಸರಿಸಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಅಮಾಯಕ ದಲಿತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಹಿರಿಯ – ಕಿರಿಯ ಎರಡೂ ತಲೆಮಾರುಗಳನ್ನು ಒಗ್ಗೂಡಿಸಿ ಸಮುದಾಯವನ್ನು ಸಂಘಟಿಸಲು ತೀರ್ಮಾನಿಸಲಾಯಿತು.
ಹಿರಿಯ ದಲಿತ ಮುಖಂಡ ಹಾಗೂ ಪುರಸಭೆ ಅಧ್ಯಕ್ಷ ಕಾಡಪ್ಪ ಅಧ್ಯಕ್ಷತೆಯಲ್ಲಿ ಪಟ್ಟಣದ ಜೈ ಭೀಮ್ ಭವನದಲ್ಲಿ ಹಮ್ಮಿಕೊಂಡಿದ್ದ ದಲಿತ ಮುಖಂಡರ ಚಿಂತನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಎಲ್ಲರೂ ಒಪ್ಪಿಗೆ ಸೂಚಿಸಿದರು.
ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಡಪ್ಪ, ತಾಲೂಕಿನ ದಲಿತ ಸಂಘಟನೆಗಳಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ತ್ಯಾಗಿ, ಸಿದ್ದಯ್ಯ ನಂತಹ ಹಿರಿಯರು ಹಾಕಿಕೊಟ್ಟ ದಲಿತ ಚಳುವಳಿಯನ್ನು ಕೆಲವರು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು , ಎಲ್ಲವೂ ನನ್ನಿಂದಲೇ ನಡೆಯಬೇಕೆಂದು ಹಿರಿಯರನ್ನು ಹಾಗೂ ಯುವ ತಲೆಮಾರನ್ನು ಕಡೆಗಣಿಸಿ ಸಮುದಾಯವನ್ನು ಬಲಿಪಶು ಮಾಡುತ್ತಿದ್ದಾರೆ. ಇದರಿಂದಾಗಿ ದಲಿತ ಚಳುವಳಿ ಬೇರೆಯದೇ ದಿಕ್ಕಿನತ್ತ ಸಾಗುತ್ತಿದೆ. ರಾಜಕೀಯ ನಮಗೆ ಶಾಶ್ವತವಲ್ಲ ಸಮುದಾಯದ ಶ್ರೇಯೋಭಿವೃದ್ದಿಗೆ ಪ್ರತಿಯೊಬ್ಬರೂ ದುಡಿಯಬೇಕು. ಆದರೆ ಕೆಲವರು ಸಮುದಾಯದಲ್ಲಿ ಗೊಂದಲ ಮಾಡುತ್ತಿದ್ದಾರೆ. ನಾಲ್ಕೈದು ಜನ ಬೇಳೆ ಬೇಯಿಸಿಕೊಳ್ಳಲು ನಾವು ಹೇಳಿದಂತೆ ಕೇಳುತ್ತಾರೆಂದು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಗುಂಪುಗಾರಿಕೆ ಆರೋಗ್ಯಕರ ಬೆಳವಣಿಗೆ ಅಲ್ಲ. ಸಮುದಾಯವಿಘಟಿಸುವ ವಿಕೃತ ಮನಸ್ಸುಗಳಿಗೆ ತಿದ್ದಿ ಹೇಳದಿದ್ದರೆ ತಾಲೂಕಿನ ಸಮುದಾಯ ಅಧೋಗತಿಗೆ ಹೋಗಲಿದೆ. ಈ ದಿಸೆಯಲ್ಲಿ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮಾಜಿಕ ಪರಿವರ್ತನೆ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಹಿರಿಯ ದಲಿತ ಮುಖಂಡ ಹಾಗೂ ನಿವೃತ್ತ ಪಿಡಿಓ ಕೊಮಾರಯ್ಯ ಮಾತನಾಡಿ, ನಮ್ಮಲ್ಲಿ ನಾಯಕತ್ವದ ಕೊರತೆ ಇದೆ. ಕಲ್ಮಶ ಇಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಿ ಒಂದೇ ಬ್ಯಾನರಿ ಅಡಿ ಎಲ್ಲರೂ ಕೆಲಸ ಮಾಡಬೇಕು. ಆದರೆ ಕೆಲವರು ತಾವೇ ಮಹಾನ್ ದಲಿತ ನಾಕರೆಂದು ಬಿಂಬಿಸಿಕೊಂಡು ತಾವೇ ಪಟ್ಟಿಮಾಡಿ ಅವರೇ ಮಂಡಿಸಿ ಅವರೇ ಅನುಮೋದನೆ ಪಡೆಯುತ್ತಾರೆ. ದಲಿತರಲ್ಲಿ ಒಡೆದಾಳುವ ನೀತಿಯನ್ನು ಮೊದಲು ನಿಲ್ಲಿಸಬೇಕು. ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಹಾಗೂ ಹಿರಿತನಕ್ಕೆ ಗೌರವ ಕೊಡಬೇಕು ನಮ್ಮ ನಡುವಿನ ತಾರತಮ್ಯನಿಲ್ಲಬೇಕು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗೋಡು ಬಸವರಾಜ್, ದಲಿತ ಸಮುದಾಯದ ಮುಖ್ಯ ಉದ್ದೇಶ ಸಂಘಟನೆ .ಇಡೀ ರಾಜ್ಯದೊಳಗೆ ದಲಿತರಲ್ಲಿ ವಿಘಟನೆ ಇದೆ. ಇದೀಗ ದಲಿತ ಸಂಘಟನೆಗಳು ಒಗ್ಗೂಡುವ ಬೆಳವಣಿಗೆ ಆರಂಭವಾಗಿವೆ. ಗುಂಪುಗಾರಿಕೆ ತೊರೆದು ಎಲ್ಲರನ್ನೂ ಒಟ್ಟಿಗೆ ತಂದು ಸಭೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಯಾರು ಯಾರನ್ನೂ ಸಹಿಸಿಕೊಳ್ಳುತ್ತಿಲ್ಲ. ಕಿತ್ತಾಟ ಬಿಟ್ಟು ಸಮುದಾಯವನ್ನು ಗಟ್ಟಿಗೊಳಿಸಬೇಕಿದೆ. ಹಿರಿಯರು ಆರೋಗ್ಯಕರ ಚರ್ಚೆ ಮಾಡಬೇಕೆಂದು ಮನವಿ ಮಾಡುತ್ತೇನೆಂದು ನುಡಿದರು.
ವೇಣು ರಾವಣ ಮಾತನಾಡಿ ಕೆಲವರು ಬೇಕಂತಲೇ ನಮ್ಮನ್ನು ಸಂಘಟನೆಯಿಂದ ದೂರ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಗಟ್ಟಿಯಾಗದ ಹೊರದು ದಲಿತರ ಅಭಿವೃದ್ದಿ ಸಾಧ್ಯವಿಲ್ಲ. ಕೋರೆಗಾಂ ಒಂದು ಸಾಂಸ್ಕೃತಿಕ ಉತ್ಸವ. ಜನವರಿಯಲ್ಲಿ ನಡೆಯುವ ಕೋರೆಗಾಂ ವಿಜಯೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಜನತೆ ಬೆಂಬಲ ನೀಡಬೇಕು. ಈ ಸಂಬಂಧ ಸಭೆ ಕರೆಯಲಾಗುತ್ತಿದ್ದು ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಾನಕೆರೆ ಲೋಕೇಶ್ ಮಾತನಾಡಿ, ಇದು ಸಮುದಾಯದ ಸಭೆ, ಇಡೀ ಸಮುದಾಯದ ಸಭೆ ಎಲ್ಲಾ ರಾಜಕೀಯ ಪಕ್ಷದವರೂ ಭಾಗವಹಿಸಬಹುದು ಆದರೆ ಸಮುದಾಯದ ವಿಚಾರ ಬಂದಾಗ ಎಲ್ಲರೂ ರಾಜಕೀಯ ಬದಿಗಿಟ್ಟು ಸಮುದಾಯದ ಜತೆ ನಿಲ್ಲಬೇಕೆಂದು ಮನವಿ ಮಾಡಿದರು. ಕಾಡಪ್ಪ ನೇತೃತ್ವದಲ್ಲಿ ತಾಲೂಕಿನಾದ್ಯಂತ ದಲಿತರನ್ನು ಒಂದೇ ವೇದಿಕೆಗೆ ತರಲು ತೀರ್ಮಾನಿಸಲಾಯಿತು.
ಜೈ ಭೀಮ್ ಮಂಜು, ನಾಗರಾಜ್ ಹೆತ್ತೂರು, ನಿವೃತ್ತ ಸೈನಿಕ ಧರ್ಮಪ್ಪ, ವಡೂರು ಹಾಲಪ್ಪ , ಧರ್ಮಪ್ಪ ನಿವೃತ್ತ ಸೈನಿಕರು ದೊಡ್ಡನಾಗರ ರಮೇಶ್, ವಡೂರು ಹಾಲಪ್ಪ, ಗೊದ್ದು ಧರ್ಮಪ್ಪ, ಮಾಜಿ ಯಡಕೆರೆ ಮಂಜುನಾಥ್ ರಾಜಶೇಖರ್, ಹಾಲೇಬೇಲೂರು ಹರೀಶ್ , ರಾಜಶೇಖರ್ ನೀಕನಹಳ್ಳಿ ಇಂದಿನಾನಗರ ಸುರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.