ಗೌರಿ ಹಬ್ಬದ ದಿನ ಎತ್ತಿನಹೊಳೆ ಯೋಜನೆಗೆ ಚಾಲನೆ ಸಿಗುತ್ತೆ
ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡ್ತಾರೆ
ಸೆಪ್ಟೆಂಬರ್ 06 ರಂದು ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ
ಬೆಂಗಳೂರು : ರಾಜ್ಯ ಸರ್ಕಾರವು ಈ ಗೌರಿ ಹಬ್ಬದಂದು ಮಹತ್ವದ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಹಾಗೂ ಕೆರೆಗಳನ್ನು ತುಂಬಿಸುವ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಹಬ್ಬದ ದಿನದಂದೇ ಉದ್ಘಾಟಿಸಲು ನಿರ್ಧರಿಸಿದೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಹಿತಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಇದೇ ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಜಿಲ್ಲೆಯ ಜನರು ಈ ಯೋಜನೆ ಬರುವಿಕೆಗಾಗಿ ಹಲವು ವರ್ಷಗಳಿಂದ ಕಾದು ಕುಳಿತಿದ್ದಾರೆ. ಈ ಯೋಜನೆಗಾಗಿ ಅನೇಕ ನಾಯಕರು ಹೋರಾಟ ಮಾಡಿದ್ದು, ಅನೇಕ ಪಕ್ಷಗಳು ಇದಕ್ಕೆ ಸಹಕಾರ ನೀಡಿವೆ ಎಂದಿದ್ದಾರೆ.
ಕಳೆದ ವರ್ಷದಿಂದ ಈ ಯೋಜನೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೆ. ಮೊನ್ನೆಯಷ್ಟೇ ಈ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥವಾಗಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದೆ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿ, ಅವುಗಳನ್ನು ಬಗೆಹರಿಸಿದ್ದೇವೆ. ಈ ಜಾಗ ಹಸ್ತಾಂತರವಾದ ಬಳಿಕ ಪ್ರಮುಖ ಕಾಲುವೆಗಳಿಗೆ ನೀರು ಹರಿದು ಹೋಗಲಿದೆ ಎಂದು ಹೇಳಿದ್ದಾರೆ.