ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ಅವೈಜ್ಞಾನಿಕ ಕಾಮಗಾರಿ ವಿರುದ್ದ ಕೊಲ್ಲಹಳ್ಳಿ ಗ್ರಾಮ ಅಭಿವೃದ್ಧಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಲೀಮ್ ಕೊಲ್ಲಹಳ್ಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಏಳೆಂಟು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿಯಿಂದ ಮಾರನಹಳ್ಳಿಯ ವರೆಗಿನ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮಂದಗತಿಯಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವೈಜ್ಞಾನಿಕ ರೂಪುರೇಷೆ, ಬೈಪಾಸ್ ರಸ್ತೆ, ಮೇಲೂ ಸೇತುವೆ , ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮದ ಎಲ್ಲೆಡೆ ಮೈಕ್ರೋ ಧೂಳಿನಿಂದ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬ್ಬಿ ಶಾಲೆ, ಜುಮ್ಮಾ ಮಸೀದಿ ಸೇರಿದಂತೆ ಅಂಗಡಿ ಮುಂಗ್ಗಟ್ಟುಗಳು ಮತ್ತು ಸಾರ್ವಜನಿಕರ ಮನೆಗಳು ಸಂಪೂರ್ಣವಾಗಿ ವಿಷಪೂರಿತ ಧೂಳಿನಿಂದ ಆವೃತಗೊಂಡಿದೆ ಎಂದರು. ವಿಷಪೂರಿತ ಧೂಳಿನಿಂದ ಕೂಡಿದ ಪರಿಸರವು ವಾಯು ಮಾಲಿನ್ಯದಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿಯ ಮುಂದುವರೆದ ಕಾಮಗಾರಿಯಿಂದ ಗ್ರಾಮದ ಒಳಚರಂಡಿಗಳು ಬಂದಾಗಿದ್ದು, ಗ್ರಾಮದ ಸರ್ಕಲ್ ನಲ್ಲಿ ಕೊಳಚೆ ನೀರು ತುಂಬಿಕೊಂಡು ಕೊಳಚೆಯಿಂದ ದುರ್ನಾತ ಮತ್ತು ಸೊಳ್ಳೆಗಳು ಸೇರಿಕೊಂಡು ಗ್ರಾಮದ ಆರೋಗ್ಯ ಹದಗೆಟ್ಟಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು
ಗ್ರಾಮದ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದಲ್ಲಿ ಬಹುತೇಕ ಜನರಿಗೆ ಶೀತ, ಕೆಮ್ಮು, ಡಸ್ಟ್ ಅಲರ್ಜಿ, ಜ್ವರ ಮುಂತಾದ ಕಾಯಿಲೆಯಿಂದ ಪೀಡಿತರಾಗಿದ್ದು ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿದ್ದಾರೆ , ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಮತ್ತು ಕೂಲಿ ಮಾಡಿ ಬದುಕುವ ಜನರ ಬದುಕು ಅದೋಗತಿಯತ್ತ ಸಾಗಿದೆ ಎಂದರು.
ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಸಂಬಂಧಪಟ್ಟವರು ಕೂಡಲೆ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ,ಅಧ್ಯಾಪಕರುಗಳಿಗೆ, ಗ್ರಾಮಸ್ಥರಿಗೆ ಅಗತ್ಯ ಉಚಿತ ಆರೋಗ್ಯ ಸೌಲಭ್ಯಗಳನ್ನು ಕಾಮಗಾರಿ ನಡೆಸುವ ಗುತ್ತಿಗೆದಾರರಿಂದ ಅಥವಾ ಸರ್ಕಾರದ ವತಿಯಿಂದ ಕಲ್ಪಿಸಬೇಕು ಹಾಗೂ ಅವೈಜ್ಞಾನಿಕವಾದ ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ಕೈಗೊಳ್ಳುವವರೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಮತ್ತು ರಾತ್ರಿ ಹೊತ್ತಿನಲ್ಲಿ ಹಿಟಾಚಿ ಹಾಗೂ ದೊಡ್ಡ ದೊಡ್ಡ ಟಿಪ್ಪರ್ ಗಳನ್ನು ಬಳಸಿ ಮಣ್ಣು ಹೊಡೆಯುತ್ತಿದ್ದು ಅತಿಯಾದ ಶಬ್ದ ಮಾಲಿನ್ಯದಿಂದ ಗ್ರಾಮಸ್ಥರು ನೆಮ್ಮದಿಯನ್ನು ಕಳೆದ ಮೂರು ವರ್ಷಗಳಿಂದ ಹಾಳು ಮಾಡಿಕೊಂಡಿದ್ದಾರೆ ಮತ್ತು ಪರಿಸರ ವಾಯುಮಾಲಿನ್ಯವನ್ನು ಕೂಡ ತಡೆಯಬೇಕಾಗಿದೆ ಎಂದರು
ಸಮಸ್ಯೆಯನ್ನು ಇಂದು ಸಂಜೆಯೊಳಗೆ ಬಗ್ಗೆಹರಿಸದಿದ್ದರೆ ದಿನಾಂಕ 21.02.2023 ರಂದು ಈ ಮೇಲಿನ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಕೊಲ್ಲಹಳ್ಳಿ ಗ್ರಾಮದ ಸರ್ಕಲ್ ನಲ್ಲಿ ಚಳುವಳಿ ಪ್ರಾರಂಭಿಸಲಾಗುವುದು ಎಂದು ಕೊಲ್ಲಹಳ್ಳಿ ಗ್ರಾಮ ಅಭಿವೃದ್ಧಿ ಸಮಿತಿಯ ಪರವಾಗಿ ಹೇಳಿದರು.