ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾದರೆ, ತೂಕ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ.
ದಸರಾ ಉತ್ಸವಕ್ಕೆ ಆಗಮಿಸಿದ ಸಂದರ್ಭ ಹಾಗೂ ಉತ್ಸವ ಮುಗಿದು ಶಿಬಿರಕ್ಕೆ ತೆರಳುವ ಮುನ್ನ ಆನೆಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಈ ಬಾರಿ ಎರಡನೇ ತಂಡದ ಗಜಪಡೆಯ ಜತೆಗೆ ಮೊದಲ ತಂಡದ ಗಜಪಡೆಗೂ ಪುನಃ ತೂಕ ಪರೀಕ್ಷೆ ನಡೆಸಲಾಯಿತು.
ನಗರದ ಧನ್ವಂತ್ರಿ ವೇ ಬ್ರಿಡ್ಜ್ನಲ್ಲಿ ಶುಕ್ರವಾರ ನಡೆದ ಪರೀಕ್ಷೆಯಲ್ಲಿ ಅರ್ಜುನನೇ -(5,950 ಕೆ.ಜಿ.) ಬಲಶಾಲಿಯಾಗಿದ್ದಾನೆ. ಮೊದಲ ತೂಕದ ಪರೀಕ್ಷೆಯಲ್ಲಿ 5,775 ಕೆಜಿ ಇದ್ದ ಅರ್ಜುನ, ಒಂದು ತಿಂಗಳ ಅಂತರದಲ್ಲಿಯೇ 175 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಗೋಪಾಲಸ್ವಾಮಿ 5,460 ಕೆಜಿ ಇದ್ದು, ಎರಡನೇ ಸ್ಥಾನದಲ್ಲಿದ್ದಾನೆ. ಮೊದಲು 5,140 ಕೆಜಿ ಇದ್ದ ಈತ ಒಂದು ತಿಂಗಳ ನಂತರ 320 ಕೆಜಿ ಹೆಚ್ಚಿಸಿಕೊಂಡಿದ್ದಾನೆ. ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ಬರೋಬ್ಬರಿ 5,000 ಕೆಜಿ ಇದ್ದು, ಮೂರನೇ ಸ್ಥಾನದಲ್ಲಿದ್ದಾನೆ.