ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಶಾಸಕ ಸಿಮೆಂಟ್ ಮಂಜು ಕಿಡಿ
ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್‌ಗೆ ₹3, ಡೀಸೆಲ್‌ಗೆ ₹3.5 ಏರಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಸರ್ಕಾರ ಹೇಳಿರುವ ಹಿನ್ನಲೆ ಶಾಸಕ ಸಿಮೆಂಟ್ ಮಂಜುನಾಥ್ ರಾಜ್ಯ ಕಾಂಗ್ರೆಸ್ ಸರ್ಕಾರದ ನೆಡೆಯನ್ನು ಖಂಡಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ದರ ಹೆಚ್ಚಿಸುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಬೇಕಾದ ಅಗತ್ಯ ಇರುವ ಕಾರಣ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ದರ ಏರಿಕೆ ಮಾಡಿದ್ದರೆ ಸರ್ಕಾರದ ವಿರುದ್ಧ ಜನ ತಿರುಗಿ ಬೀಳಬಹುದು ಎಂಬ ಆತಂಕದಿಂದ ಚುನಾವಣೆ ಮುಗಿದ ನಂತರ ಏರಿಕೆ ಮಾಡಿರುವುದು ವಿಪರ್ಯಾಸ.
ಮತ್ತೊಂದೆಡೆ ಅವೈಜ್ಞಾನಿಕವಾದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಜನರ ಮೇಲೆ ಬೆಲೆ ಏರಿಕೆ ಅಸ್ತ್ರ ಪ್ರಯೋಗ ಮಾಡುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದ್ದು ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದೆ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಮಾಡಿ ಇದೀಗ ಬೆಲೆ ಏರಿಕೆ ಸಹ ಮಾಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಇದರ ವಿರುದ್ಧ ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.